×
Ad

ಬೆಂಗಳೂರು: ಇಎಂಐ ಕಟ್ಟುವುದಾಗಿ ನಂಬಿಸಿ ಕಾರು ಪಡೆದು ವಂಚನೆ; ಆರೋಪಿಗಳ ಬಂಧನ, 48 ಕಾರುಗಳ ಜಪ್ತಿ

Update: 2021-02-01 22:19 IST

ಬೆಂಗಳೂರು, ಫೆ.1: ಲಾಕ್‍ಡೌನ್ ವೇಳೆ ಕಾರುಗಳ ಇಎಂಐ ಕಟ್ಟುವುದಾಗಿ ಮಾಲಕರನ್ನು ನಂಬಿಸಿ ಅವರಿಂದ ಕಾರು, ಅಸಲಿ ದಾಖಲೆಗಳನ್ನು ಪಡೆದು ನೆರೆಯ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ವಂಚಕರ ಜಾಲವನ್ನು ಭೇದಿಸಿರುವ ನಗರ ಪೂರ್ವ ವಿಭಾಗದ ಪೊಲೀಸರು 4 ಕೋಟಿ ರೂ. ಮೌಲ್ಯದ 48 ಕಾರುಗಳನ್ನು ಜಪ್ತಿ ಮಾಡಿದ್ದಾರೆ.

ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಇಲ್ಲಿನ ಗೋವಿಂದಪುರ ನಿವಾಸಿ ಎನ್.ಅಹ್ಮದ್ ನೀಡಿದ ದೂರಿನ ಮೇರೆಗೆ ನಗರದ ಜೆ.ರಿಯಾಝ್, ಆಂಧ್ರಪ್ರದೇಶದ ಅನಂತಪುರದ ಶೇಖ್ ಮುಖ್ತಿಯಾರ್, ವೈ.ವಿನೋದ್ ಕುಮಾರ್, ರಮೇಶ್ ನಾಯ್ಡು, ನರಸಿಂಹ ರೆಡ್ಡಿ, ಟಿ.ಪ್ರಭಾಕರನ್ ಹಾಗೂ ಚಾಕ್ಲಿ ನರೇಶ್ ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಬಂಧಿತರಿಂದ 4 ಕೋಟಿ ರೂ. ಮೌಲ್ಯದ 4 ಇನ್ನೋವಾ ಕ್ರಿಸ್ತಾ, 3 ಇನ್ನೋವಾ, 16 ಟೊಯೋಟಾ, 17 ಸ್ವಿಪ್ಟ್ ಡಿಸೈರ್ ಸೇರಿದಂತೆ ವಿವಿಧ ಕಂಪನಿಗಳ 48 ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಅವರು ಮಾಹಿತಿ ನೀಡಿದರು.

ಕಾರುಗಳಿಗೆ ಇಎಂಐ ಪಾವತಿಸದ ಮಾಲಕರನ್ನು ಗುರಿಯಾಗಿಸಿಕೊಂಡು ನಯವಾಗಿ ಮಾತನಾಡಿ ಬ್ಯಾಂಕಿಗೆ ಮಾಡಿದ್ದ ಮುಂಗಡ ಹಣ ವಾಪಸ್ ನೀಡುವುದಾಗಿ ಹಾಗೂ ಇಎಂಐ ಹಣ ತಾವೇ ಪಾವತಿಸುವುದಾಗಿ ನಂಬಿಸಿ ಅವರಿಂದ ಕಾರು ಖರೀದಿಸುತ್ತಿದ್ದರು. ಬಳಿಕ ಆಂಧ್ರದಲ್ಲಿ ಕಡಿಮೆ ಬೆಲೆಗೆ ಕಾರುಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.

ಬಂಧಿತರ ಪೈಕಿ ಆರೋಪಿ ರಿಯಾಝ್, ಶೇಖ್ ಮುಖ್ತಿಯಾರ್ ಕಾರು ಡೀಲರ್ ಹಾಗೂ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಕೆಲವು ಕಾರುಗಳ ಮಾಲಕರು ಬ್ಯಾಂಕರ್ ಹಾಗೂ ಖಾಸಗಿ ಫೈನಾನ್ಸ್ ಗಳಲ್ಲಿ ಸಾಲದ ಮೇಲೆ ಖರೀದಿಸಿದ್ದ ಕಾರುಗಳ ಇಎಂಐ ಪಾವತಿಸಲು ಲಾಕ್ ಡೌನ್ ವೇಳೆ ಪರದಾಡುತ್ತಿದ್ದರು.

ಇಂತಹವರನ್ನು ಗುರಿಯಾಗಿಕೊಳ್ಳುತ್ತಿದ್ದ ಆರೋಪಿ ರಿಯಾಝ್, ಕಾರು ಖರೀದಿ ವೇಳೆ ಮಾಡಿದ್ದ ಮುಂಗಡ ಹಣ ನೀಡುವುದಾಗಿ ಹಾಗೂ ಉಳಿದ ಇಎಂಐ ಪಾವತಿಸುವುದಾಗಿ ನಂಬಿಸಿ ದಾಖಲಾತಿಯೊಂದಿಗೆ ಕಾರನ್ನು ಖರೀದಿಸುತ್ತಿದ್ದ. ಇದೇ ವೇಳೆ ಕೇಂದ್ರ ಸರಕಾರ ಮೂರು ತಿಂಗಳ ಕಾಲ ಇಎಂಐ ಪಾವತಿ ಕಡ್ಡಾಯವಲ್ಲ ಎಂದು ಅಧಿಸೂಚನೆ ಹೊರಡಿಸಿತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡ ಈತ ಸಹಚರರ ನೆರವಿನಿಂದ ಕಾರುಗಳನ್ನು ನೆರೆಯ ಆಂಧ್ರಪ್ರದೇಶದ ಅನಂತಪುರದ ಆರ್‍ಟಿಒ ಕಚೇರಿಯಲ್ಲಿ ಅಕ್ರಮವಾಗಿ ಕಾರು ನೋಂದಣಿ ಮಾಡಿಸಿ, ಮಾರಾಟ ಮಾಡುತ್ತಿದ್ದ ಎಂದು ವಿಚಾರಣೆಯಲ್ಲಿ ಮಾಹಿತಿ ಸಿಕ್ಕಿದೆ.

ಅಧಿಕಾರಿಗಳು ಅಮಾನತು: ಎನ್‍ಓಸಿ ಇಲ್ಲದೆಯೇ ಕರ್ನಾಟಕ ರಾಜ್ಯದ ನೋಂದಣಿ ಸಂಖ್ಯೆ ಇರುವ ಕಾರುಗಳಿಗೆ ಎಪಿ-39ಗೆ ಹೊಸನೋಂದಣಿ ಮಾಡಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಆಂಧ್ರಪ್ರದೇಶ ಅನಂತಪುರ ಸಾರಿಗೆ ಅಧಿಕಾರಿಗಳು, ಕೃತ್ಯದಲ್ಲಿ ಭಾಗಿಯಾಗಿದ್ದ ಅಲ್ಲಿನ ಆರ್‍ಟಿಒ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.

ನಾಲ್ವರಿಗೆ ಶೋಧ: ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇನಾಯತ್, ಸಲೀಂ, ಜಬೀ ಹಾಗೂ ಸುಹೇಲ್ ಸೇರಿ ನಾಲ್ವರನ್ನು ಪತ್ತೆಮಾಡಲು ಶೋಧ ನಡೆಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಡಾ.ಎಸ್. ಡಿ.ಶರಣಪ್ಪ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News