6ನೇ ದಿನಕ್ಕೆ ಕಾಲಿಟ್ಟ ಗುಪ್ತಶೆಟ್ಟಿಹಳ್ಳಿ ನಿರಾಶ್ರಿತರ ಧರಣಿ: ವಿವಿಧ ಪಕ್ಷ, ಸಂಘಟನೆಗಳ ಬೆಂಬಲ
ಚಿಕ್ಕಮಗಳೂರು, ಫೆ.1: ಗುಪ್ತಶೆಟ್ಟಿಹಳ್ಳಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಅರಣ್ಯ ಇಲಾಖೆ ಸಾರಗೋಡು ಗ್ರಾಮದಿಂದ ಒಕ್ಕಲೆಬ್ಬಿಸಿದ ನಿಜವಾದ ಸಂತ್ರಸ್ತರಿಗೆ ಸರಕಾರ ನಿಗದಿ ಮಾಡಿದ್ದ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ಧರಣಿ 6ನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತ ಬೇಡಿಕೆಗಳನ್ನು ಈಡೇರಿಸುವವರೆಗೂ ಧರಣಿಯನ್ನು ಮುಂದುವರಿಸಲಾಗುವುದು ಎಂದು ಸಂತ್ರಸ್ತ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ತಾಲೂಕಿನ ಆಲ್ದೂರು ಹೋಬಳಿ ವ್ಯಾಪ್ತಿಯಲ್ಲಿರುವ ಗುಪ್ತಶೆಟ್ಟಿಹಳ್ಳಿ ಗ್ರಾಮದ 10 ಕುಟುಂಬಗಳು ಕಳೆದ 5 ದಿನಗಳ ಹಿಂದೆ ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕು ಹಾಗೂ ಪರಿಹಾರದ ಪ್ಯಾಕೆಜ್ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಗ್ರಾಮದಲ್ಲಿ ಟೆಂಟ್ ನಿರ್ಮಿಸಿಕೊಂಡು ಅಂಬೇಡ್ಕರ್ ಹಾಗೂ ಪೊಲೀಸ್ ಅಧಿಕಾರಿ ದಿವಂಗತ ಮಧುಕರ್ ಶೆಟ್ಟಿ ಭಾವಚಿತ್ರಗಳೊಂದಿಗೆ ಧರಣಿ ಆರಂಭಿಸಿದ್ದರು. ಗ್ರಾಮದಲ್ಲಿ ಎರಡು ದಿನ ಧರಣಿ ನಡೆಸಿದರೂ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಧರಣಿಯನ್ನು ರವಿವಾರ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಧರಣಿ ಸ್ಥಳದಲ್ಲೇ ಅಡುಗೆ ಮಾಡಿಕೊಳ್ಳುತ್ತಾ ಬೀಡು ಬಿಟ್ಟಿದ್ದಾರೆ.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಟೆಂಟ್ ನಿರ್ಮಿಸಿಕೊಂಡು ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಡಳಿತವನ್ನು ಆಗ್ರಹಿಸುತ್ತಿರುವ ಗ್ರಾಮಸ್ಥರು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಸರಕಾರ, ಜನಪ್ರತಿನಿಧಿಗಳು, ಕಂದಾಯ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಹೋರಾಟದ ಕ್ರಾಂತಿಗೀತೆಗಳನ್ನು ಹಾಡುತ್ತಾ ಧರಣಿಯನ್ನು ಮುಂದುವರಿಸಿದರು. ಗ್ರಾಮಸ್ಥರ ಧರಣಿಗೆ ಸೋಮವಾರ ಬಿಎಸ್ಪಿ, ರೈತಸಂಘ, ದಸಂಸ, ಸಂವಿಧಾನ ಸಂರಕ್ಷಣಾ ಸಮಿತಿ ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು, ಗ್ರಾಮಸ್ಥರೊಂದಿಗೆ ಧರಣಿಯಲ್ಲಿ ಈ ಸಂಘಟನೆಗಳ ಮುಖಂಡರು ಭಾಗವಹಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥರ ಧರಣಿ ಬೆಂಬಲಿಸಿ ಮಾತನಾಡಿದ ಸಂವಿಧಾನ ಸಂರಕ್ಷಣಾ ಸಮಿತಿ ಸಂಚಾಲಕ ಗೌಸ್ ಮೊಹಿದ್ದೀನ್, ಗುಪ್ತಶೆಟ್ಟಿಹಳ್ಳಿ ಗ್ರಾಮಕ್ಕೆ ವಿದ್ಯುತ್, ರಸ್ತೆ, ಅಂಗನವಾಡಿ ಕೇಂದ್ರ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಗ್ರಾಮಸ್ಥರು ಅನೇಕ ವರ್ಷಗಳಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದು, 15 ವರ್ಷಗಳ ಕಾಲ ಗ್ರಾಮಸ್ಥರು ಮೂಲಸೌಕರ್ಯಗಳಿಲ್ಲದೇ ಬದುಕುವಂತಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಜಿಲ್ಲಾಡಳಿತ ಕೂಡಲೇ ಗುಪ್ತಶೆಟ್ಟಿಳ್ಳಿ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಸಮಿತಿಯ ಮತ್ತೋರ್ವ ಸಂಚಾಲಕ ಕೃಷ್ಣಮೂರ್ತಿ ಮಾತನಾಡಿ, ಸಾರಗೋಡು ಗ್ರಾಮದಲ್ಲಿ 32 ಕುಟುಂಬಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿ ಬೀದಿಪಾಲು ಮಾಡಿತ್ತು. ಈ ವೇಳೆ ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಾಗಿ ಹೆಸರು ಮಾಡಿದ್ದ ಎಸ್ಪಿ ಮಧುಕರ್ ಶೆಟ್ಟಿ ಹಾಗೂ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಬೀದಿಪಾಲಾಗುತ್ತಿದ್ದ 32 ಕುಟುಂಬಗಳ ನೆರವಿಗೆ ಧಾವಿಸಿದ್ದರು. ರಾಜಕಾರಣಿಗಳು, ಪ್ರಭಾವಿಗಳ ಒತ್ತಡ ಇದ್ದಾಗ್ಯೂ ಆಲ್ದೂರು ಹೋಬಳಿಯ ಸ.190ರಲ್ಲಿ ಭೂ ಮಾಲಕ ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿದ್ದ ಸರಕಾರಿ ಜಾಗವನ್ನು ಖುಲ್ಲಾ ಮಾಡಿಸಿ 32 ಕುಟುಂಬಗಳಿಗೆ ತಲಾ ಎರಡು ಎಕರೆಯಂತೆ ಜಾಗವನ್ನು ಹಂಚಿಕೆ ಮಾಡಿದ್ದರು. ಸಂತ್ರಸ್ತರು ಮನೆ ಕಟ್ಟಿಕೊಳ್ಳಲು 4 ಎಕರೆ ನಿವೇಶನ ಜಾಗವನ್ನೂ ನೀಡಿದ್ದರು. ಆದರೆ ನಂತರ ಬಂದ ಅಧಿಕಾರಿಗಳು ಗುಪ್ತಶೆಟ್ಟಿಹಳ್ಳಿಯ ಸಂತ್ರಸ್ತರನ್ನು ಮರೆತಿದ್ದು, ಜಿಲ್ಲಾಡಳಿತ ನೀಡಿರುವ ಜಾಗದಲ್ಲಿ ನೆಲೆಸಿರುವ 10 ನಿರಾಶ್ರಿತ ಕುಟುಂಬಗಳಿಗೆ ಅಂಗನವಾಡಿ ಕೇಂದ್ರ ರಸ್ತೆ, ನೀರು, ವಿದ್ಯುತ್, ಆಶ್ರಯ ಮನೆಯಂತಹ ಮೂಲಸೌಕರ್ಯಗಳನ್ನು ಒದಗಿಸದೇ ತಾರತಮ್ಯ ಮಾಡಿದೆ. ಅಂದು ಈ 10 ಸಂತ್ರಸ್ತರಿಗೆ ಸರಕಾರ ಪರಿಹಾರ, ಸಾಗಣೆ ವೆಚ್ಚ, ಅಪ್ರಾಪ್ತ ಮಕ್ಕಳ ವೆಚ್ಚದ ಪರಿಹಾರ ನಿಗದಿ ಮಾಡಿದ್ದೂ ಇಂದಿಗೂ ನಿರಾಶ್ರಿತರಿಗೆ ಈ ಪರಿಹಾರವನ್ನೂ ನೀಡದೇ ನಿವಾಸಿಗಳನ್ನು ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.
ಗುಪ್ತಶೆಟ್ಟಿಹಳ್ಳಿ ಗ್ರಾಮಸ್ಥ ಹಾಗೂ ಸಂತ್ರಸ್ತ ಭೈರಿಗದ್ದೆ ರಮೇಶ್ ಮಾತನಾಡಿ, 32 ಕುಟುಂಬಳಿಗೆ ಗುಪ್ತಶೆಟ್ಟಿಯ ಸ.ನಂ.190ರಲ್ಲಿ ತಲಾ ಎರಡು ಎಕರೆ ನೀಡಲಾಗಿದೆಯಾದರೂ ನಂತರ ನ್ಯಾಯಾಲಯ 32 ಕುಟುಂಬಗಳಿದ್ದ ಜಾಗ ಮೀಸಲು ಅರಣ್ಯ ವ್ಯಾಪ್ತಿಗೆ ಸೇರಲ್ಲ ಎಂದು ಆದೇಶ ನೀಡಿದ್ದರಿಂದ 32 ಕುಟುಂಬಗಳ ಪೈಕಿ 22 ಕುಟುಂಬಗಳು ಮೊದಲಿದ್ದ ಸಾರಗೋಡು ಗ್ರಾಮದಲ್ಲೇ ಉಳಿದುಕೊಂಡಿದ್ದಾರೆ. ಅವರಿಗೆ ಅಲ್ಲಿ ಎಲ್ಲ ಮೂಲಸೌಕರ್ಯಗಳನ್ನೂ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಯ ಬೇಜವ್ದಾರಿಯಿಂದಾಗಿ ಗುಪ್ತಶೆಟ್ಟಿಹಳ್ಳಿಯಲ್ಲಿ ನೆಲೆಸಿರುವ 10 ಕುಟುಂಬಗಳು ಮೂಲಸೌಕರ್ಯವಿಲ್ಲದೇ ಅತಂತ್ರ ಪರಿಸ್ಥಿತಿಯಲ್ಲಿ ಕಳೆದ 15 ವರ್ಷಗಳಿಂದ ಬದುಕುವಂತಾಗಿದೆ. ಮೂಲಸೌಕರ್ಯವೂ ಇಲ್ಲ, ಪರಿಹಾರವೂ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಡಳಿತ ನಮ್ಮ ಬೇಡಿಕೆ ಈಡೇರಿಸುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.
ಧರಣಿಯಲ್ಲಿ ಗುಪ್ತಶೆಟ್ಟಿಹಳ್ಳಿ ಗ್ರಾಮದ 10 ನಿರಾಶ್ರಿತ ಕುಟುಂಬಸ್ಥರು ಭಾಗವಹಿಸಿದ್ದು, ಧರಣಿ ಬೆಂಬಲಿಸಿ ದಸಂಸ ಮುಖಂಡ ಗಣೇಶ್, ವಿಶ್ವರತ್ನ ಅಂಬೇಡ್ಕರ್ ಸಂಘದ ವೆಂಕಟೇಶ್, ಆಮ್ ಆದ್ಮಿ ಪಕ್ಷ ಡಾ.ಸುಂದರ್ ಗೌಡ, ಸಂವಿಧಾನ ಸಂರಕ್ಷಣಾ ಸಮಿತಿಯ ಹಸನಬ್ಬ, ನೀಲಗುಳಿ ಪದ್ಮನಾಭ ಹಾಗೂ ರೈತ ಸಂಘ, ಬಿಎಸ್ಪಿಯ ಮುಖಂಡರು ಭಾಗವಹಿಸಿದ್ದರು.
ನಿರಾಶ್ರಿತರ ಧರಣಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕು ಕಚೇರಿಯ ತಹಶೀಲ್ದಾರ್ ಕಾಂತರಾಜ್ ಸ್ಥಳೀಯ ಕಂದಾಯಾಧಿಕಾರಿಗಳೊಂದಿಗೆ ಸೋಮವಾರ ಬೆಳಗ್ಗೆ ಗುಪ್ತಶೆಟ್ಟಿಹಳ್ಳಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸ್ಥಳೀಯರ ಹೇಳಿಕೆಗಳನ್ನು ಪಡೆದು ನಿರಾಶ್ರಿತರ ಮೂಲಸೌಕರ್ಯಗಳ ಬೇಡಿಕೆಗಳನ್ನು ಪರಿಶೀಲನೆ ನಡೆಸಿದ್ದಾರೆ. ನಿರಾಶ್ರಿತರಿಗೆ ಜಿಲ್ಲಾಡಳಿತ ನೀಡಿರುವ ನಿವೇಶನ ಜಾಗ, ವಿದ್ಯುತ್ ಸಮಸ್ಯೆ, ಅಂಗನವಾಡಿ ಕೇಂದ್ರ ಇಲ್ಲದಿರುವುದು, ನಿವೇಶನ ಹಕ್ಕುಪತ್ರ ನೀಡದಿರುವ ಬಗ್ಗೆ ತಹಶೀಲ್ದಾರ್ ಮಾಹಿತಿ ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ.