×
Ad

ಯುವ ಕಾಂಗ್ರೆಸ್‌ ಚುನಾವಣೆ ಎಂಬ ಪ್ರಹಸನ

Update: 2021-02-03 14:20 IST

ಬೆಂಗಳೂರು: ಭಾರತೀಯ ಕಾಂಗ್ರೆಸ್ ಪಕ್ಷದ ಅಂಗಸಂಸ್ಥೆ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಪಕ್ಷದ ಮುಖಂಡರು ನೇಮಕ ಮಾಡುತ್ತಿದ್ದರು. ಆದರೆ ಈ ಬಾರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಪರಿಕಲ್ಪನೆಯ ಪ್ರಕಾರ ಚುನಾವಣೆಯು ಪಾರದರ್ಶಕವಾಗಿ ನಡೆಯಬೇಕು ಮತ್ತು ಅರ್ಹರಿಗೆ ನಾಯಕತ್ವ ಸಿಗಬೇಕು ಎಂಬ ಉದ್ದೇಶದಿಂದ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಚುನಾವಣೆ ನಡೆಸಲಾಗಿತ್ತು. ರಾಜ್ಯಾದ್ಯಂತ ಜನವರಿ 10,11,12 ನೆ ದಿನಾಂಕದಂದು ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದ ಪದಾಧಿಕಾರಿ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿತ್ತು. ಆದರೆ ಇದೀಗ ಚುನಾವಣೆ ಕಳೆದು ಒಂದು ತಿಂಗಳಾಗುತ್ತಾ ಬಂದರೂ ಫಲಿತಾಂಶದ ಅನಿಶ್ಚಿತತೆಯ ಕುರಿತು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ ಎಂದು ತಿಳಿದು ಬಂದಿದೆ.

ಜನವರಿ ತಿಂಗಳ 10,11,12ನೇ ತಾರೀಕಿನಂದು ಚುನಾವಣೆ ನಡೆಸಲಾಗಿದ್ದು, 20ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿಕೆ ನೀಡಲಾಗಿತ್ತು. ಬಳಿಕ ಫಲಿತಾಂಶ ಪ್ರಕಟಣೆಯನ್ನು ಮುಂದೂಡಿ, 29 ಮತ್ತು 30 ತಾರೀಕಿನಿಂದ ಪ್ರಕಟಿಸಲಾಗುವುದು ಎಂದು ಹೇಳಲಾಗಿತ್ತು. ಬಳಿಕ 31ರಂದು ಬ್ಲಾಕ್ ಮಟ್ಟದ ಫಲಿತಾಂಶ, ಫೆಬ್ರವರಿ 1ರಂದು ಜಿಲ್ಲಾ ಮಟ್ಟದ ಮತ್ತು 2ನೇ ತಾರೀಕಿನಂದು ರಾಜ್ಯ ಮಟ್ಟದ ಫಲಿತಾಂಶ ಘೋಷಿಸಲಾಗುವುದು ಎಂದು ಆದೇಶ ಹೊರಡಿಸಲಾಗಿತ್ತು ಎನ್ನಲಾಗಿದೆ. 31ರಂದು ಬ್ಲಾಕ್ ಮಟ್ಟದ ಚುನಾವಣೆಯ ಫಲಿತಾಂಶವನ್ನು ಘೋಷಿಸಲಾಗಿದ್ದರೂ, ಬಳಿಕ ಅದನ್ನು ಹಿಂದೆಗೆಯಲಾಗಿದೆ ಎಂದು ತಿಳಿದು ಬಂದಿದೆ.

ಪಕ್ಷದ ಆಂತರಿಕ ಚುನಾವಣೆಯನ್ನು ಈ ರೀತಿಯಲ್ಲಿ ಮುಂದೂಡುತ್ತಿರುವ ಕುರಿತು ಹಲವಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ತಾಣದಾದ್ಯಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಒಟ್ಟು ಏಳು ತಿಂಗಳು ತಗಲಿದ್ದು, ಕಾರ್ಯಕರ್ತರು ಮತ್ತು ನಾಯಕರು ಕಷ್ಟಪಟ್ಟು ಚುನಾವಣಾ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಪಕ್ಷದ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಲಾಗಿಲ್ಲ. ಹಾಗಾದರೆ ಏಳು ತಿಂಗಳ ಶ್ರಮವನ್ನು ವ್ಯರ್ಥಗೊಳಿಸಲಾಗುತ್ತಿದೆಯೇ? ಭಾರತಕ್ಕೆ ಮಾಹಿತಿ ತಂತ್ರಜ್ಞಾನವನ್ನು ಪರಿಚಯಿಸಿದ್ದೇವೆ ಎಂಬ ಹೆಗ್ಗಳಿಕೆಯಿರುವ ಕಾಂಗ್ರೆಸ್ ಪಕ್ಷ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಸಿದ ಮತದಾನದ ಫಲಿತಾಂಶ ಬಿಡುಗಡೆ ಮಾಡಲು ಯಾಕಿಷ್ಟು ತಡ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತರು ಪ್ರಶ್ನೆ ಮುಂದಿಟ್ಟಿದ್ದಾರೆ.

ಈ ಡಿಜಿಟಲ್ ಮತದಾನದ ಎಣಿಕೆಯ ಫಲಿತಾಂಶ ಹೊರ ಬೀಳಲು ಇಷ್ಟೆಲ್ಲಾ ಸಮಯ ವ್ಯರ್ಥವಾಗುತ್ತದೆ ಎಂದಾದರೆ ಸೀದಾ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬಹುದಿತ್ತು. ಇನ್ನು ಇವಿಎಮ್‌ ಕುರಿತು ನಂಬಿಕೆಯಿಲ್ಲದ ಕಾಂಗ್ರೆಸ್‌ ಈ ಚುನಾವಣೆಯನ್ನು ಮೊಬೈಲ್‌ ಅಪ್ಲಿಕೇಶನ್‌ ಮೂಲಕ ನಡೆಸಿದ್ದು ಯಾಕೆ ಎಂದು ಕಾರ್ಯಕರ್ತರು ಸಂದೇಹಪಡುತ್ತಿದ್ದಾರೆ.

ಜನವರಿ 31ರಂದು ಬ್ಲಾಕ್ ಮಟ್ಟದ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿ, ಎರಡು ದಿನಗಳ ಬಳಿಕ ಹಿಂದೆಗೆದುಕೊಳ್ಳಲಾಗಿತ್ತು. ಪ್ರಕಟನೆಗೊಂಡ ಫಲಿತಾಂಶವನ್ನು ಹಿಂದೆಗೆಯುವಂತಹ ತಪ್ಪು ಅದರಲ್ಲೇನಿತ್ತು? ಇದರಿಂದಾಗಿ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಮೇಲೆ ಸಂದೇಹ ಮೂಡುವಂತಾಗಿದೆ ಎಂದು ಸಾಮಾಜಿಕ ತಾಣದಲ್ಲಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಲಿಷ್ಠವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನ ಜನರಿಗೆ ಸಮರ್ಪಕ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ತಾವು ಜಯಗಳಿಸಿದ ಬಳಿಕ ದೇಶದ ಜನತೆಗೆ ನ್ಯಾಯ ಒದಗಿಸಬಹುದೇ? ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಮುನ್ನಡೆಸುತ್ತಿರುವ ಡಿಕೆ ಶಿವಕುಮಾರ್ ರವರಿಗೆ ಹೆಗಲು ನೀಡಿ ಕಾರ್ಯನಿರ್ವಹಿಸಲು ಸಮರ್ಥ ಯುವ ನಾಯಕನ ಅಗತ್ಯವಿದೆ. ಆದರೆ ಪಕ್ಷದ ಒಳಗಿನ ಕೆಲ ಸ್ಥಾಪಿತ ಹಿತಾಸಕ್ತಿಗಳ ಕಾರಣದಿಂದ ಪಕ್ಷಕ್ಕೆ ತೊಂದರೆಯೇ ಹೊರತು ಇತರರಿಗಲ್ಲ ಎಂದು ಕಾರ್ಯಕರ್ತರು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.

ಸದ್ಯ ಯುವ ಕಾಂಗ್ರೆಸ್ ಚುನಾವಣೆಯ ಈ ಎಲ್ಲ ಗೊಂದಲಗಳು ಕಾರ್ಯಕರ್ತರನ್ನು ಮತ್ತು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮತದಾನದ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಪದಾಧಿಕಾರಿಗಳು, ಸ್ಫರ್ಧಾಕಾಂಕ್ಷಿಗಳು ಹಾಗೂ ಕಾರ್ಯಕರ್ತರು "ಈ ಬಾರಿ ನಮ್ಮ ಚುನಾವಣೆಯು ಉತ್ತಮವಾಗಿ, ಅತ್ಯಾಧುನಿಕ ರೀತಿಯಲ್ಲಿ ನಮ್ಮ ಚುನಾವಣೆ ನಡೆದಿದೆ ಎಂದು  ಹೇಳಿಕೊಳ್ಳುತ್ತಿದ್ದರು. ಆದರೆ ಇದೀಗ ತಿಂಗಳು ಕಳೆಯುತ್ತಿದ್ದರೂ ಚುನಾವಣಾ ಫಲಿತಾಂಶ ಹೊರ ಬರದಿರುವುದು ಹಾಗೂ ಅದರ ಹಿಂದಿನ ಕಾರಣಗಳ ಕುರಿತು ಕಾರ್ಯಕರ್ತರಲ್ಲಿ ಮುಜುಗರದ ಸನ್ನಿವೇಶ ನಿರ್ಮಾಣವಾಗಿದೆ.

ಈಗಾಗಲೇ ಬಲಿಷ್ಠ ಬಿಜೆಪಿ ಪಕ್ಷವನ್ನು ಎದುರಿಸುವಲ್ಲಿ ಕಾಂಗ್ರೆಸ್‌ ಪಕ್ಷವು ವಿಫಲವಾಗುತ್ತಿದೆ ಎಂಬ ಹೇಳಿಕೆಗಳು ಕೇಳಿ ಬರುತ್ತಿರುವುದರ ನಡುವೆಯೂ ತಮ್ಮ ಆಂತರಿಕ ಚುನಾವಣೆಯನ್ನು ಸಮರ್ಪಕವಾಗಿ ನಡೆಸಲಾಗುತ್ತಿಲ್ಲ ಎಂಬ ಟೀಕೆಗಳೂ ಕಾಂಗ್ರೆಸ್‌ ವಿರುದ್ಧ ಕೇಳಿ ಬರುತ್ತಿದೆ. ಈ ಕುರಿತು ಕಾರ್ಯಕರ್ತರ ನಡುವೆ ತೀವ್ರ ನಿರಾಸೆಯ ವಾತಾವರಣ ಸೃಷ್ಟಿಯಾಗಿದೆ. 

ಚುನಾವಣೆ ಫಲಿತಾಂಶದ ವಿಳಂಬದ ಕುರಿತಾದಂತೆ ಯುವ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷ ಬಿ.ವಿ ಶ್ರೀನಿವಾಸ್‌ ರನ್ನು ʼವಾರ್ತಾಭಾರತಿʼ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅವರು ಪ್ರತಿಕ್ರಿಯೆ ನೀಡಿದ ಕೂಡಲೇ ಸುದ್ದಿಯಲ್ಲಿ ಸೇರಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News