ಫೆ.6 ರಂದು ರಾಷ್ಟ್ರೀಯ, ರಾಜ್ಯ ಹೆದ್ದಾರಿ ತಡೆ : ಬಡಗಲಪುರ ನಾಗೇಂದ್ರ
ಮೈಸೂರು : ಅನುಮತಿ ನೀಡಲಿ ಬಿಡಲಿ ಫೆ.6 ರಂದು ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಯುಕ್ತ ಕಿಸಾನ್ ಮೋರ್ಚಾ ನಿರ್ಣಯದಂತೆ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ರಾಜ್ಯದ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬೆಳಿಗ್ಗೆ 12 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ತಡೆಯಲಾಗುವುದು. ಪೊಲೀಸರು ನಮ್ಮ ಹೋರಾಟಕ್ಕೆ ಅನುಮತಿ ನೀಡುವುದಿಲ್ಲ. ಆದರೆ ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿವುದಿಲ್ಲ ಎಂದು ಹೇಳಿದರು.
ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪಿತೂರಿಯನ್ನು ದೇಶದ ಜನತೆ ಗಮನಿಸಿದ್ದಾರೆ. ಇವರ ಹತಾಶೆಯ ಪ್ರತೀಕ ಹೆಚ್ಚುದಿನ ನಡೆಯುವುದಿಲ್ಲ, ಸದ್ಯದಲ್ಲಿಯೇ ಇವರು ಇದರ ಫಲವನ್ನು ಅನುಭವಿಸಲಿದ್ದಾರೆ ಎಂದು ಹೇಳಿದರು. ರೈತರ ಹೋರಾಟವನ್ನು ಹತ್ತಿಕ್ಕಲು ದೆಹಲಿ ಗಡಿಯಲ್ಲಿ ಮೊಳೆ ಹೊಡೆಸಿಲಾಗಿದೆ. ನಾವು ನಮ್ಮ ದೇಶದ ರಾಜದಾನಿಗೆ ಹೋಗುತ್ತಿದ್ದೇವೆ ಹೊರತು ಪಕ್ಕದ ಚೀನಾ ದೇಶಕ್ಕಲ್ಲಾ ಎಂದು ವ್ಯಂಗ್ಯವಾಡಿದರು.
ನಮ್ಮ ಹೋರಾಟ ಬರೀ ರೈತರಷ್ಟೇ ಅಲ್ಲ, ದಲಿತರು.ಕಾರ್ಮಿಕರು, ಮಹಿಳೆಯರು ಸೇರಿದಂತೆ ಸಾಮಾನ್ಯ ಜನರು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಪ್ರತಿಬಟನೆ ಹತ್ತಿಕ್ಕುವಷ್ಟು ಗಟ್ಟಿಗೊಳ್ಳುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ ಉಪಸ್ಥಿತರಿದ್ದರು.