ನಡುರಸ್ತೆಯಲ್ಲಿ ಕೆಟ್ಟುನಿಂತ ಡಕೋಟ ಬಸ್ಸಿನಂತಾದ ಬಿಜೆಪಿ ಸರಕಾರ: ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು, ಫೆ. 3: ‘ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರಕಾರ ‘ಟೇಕ್ ಆಫ್ ಆಗಿಲ್ಲ, ಟೇಕ್ ಆಫ್ ಆಗಿಲ್ಲ' ಎಂದು ಸದನದಲ್ಲಿ ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದರು. ಈಗಿನ ಸರಕಾರ ‘ಟೇಕ್ ಆಫ್’ ಅಲ್ಲ ಸಂಪೂರ್ಣ ‘ಆಫ್ ಆಗಿ' ನಡುರಸ್ತೆಯಲ್ಲಿ ಕೆಟ್ಟು ನಿಂತಿರುವ ಹಳೆ ಡಕೋಟ ಬಸ್‍ನಂತಾಗಿದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಮೇಲೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಡ್ರೈವಿಂಗ್ ಮೊದಲೇ ಬರೋದಿಲ್ಲ, ಜೊತೆಗೆ ನಾಲ್ಕು ದಿಕ್ಕುಗಳಿಂದಲೂ ಕಾಲೆಳೆಯುತ್ತಿರುವ ಸ್ವಪಕ್ಷದವರ ಕಾಟ. ಬಸ್ ಮುಂದಕ್ಕೆ ಹೇಗೆ ಹೋಗೋದು? ಇಂತಹ ಸರಕಾರವನ್ನು ‘ರಿಪೇರಿ' ಮಾಡಲಾಗುವುದಿಲ್ಲ, ಜನರೇ ‘ರಿಪ್ಲೇಸ್' ಮಾಡಬೇಕಾಗುತ್ತದೆ ಅಷ್ಟೇ. ಆ ಕಾಲ ಸದ್ಯದಲ್ಲಿಯೇ ಬರಲಿದೆ' ಎಂದರು.
'ನಿಮ್ಮ ಭರವಸೆ ನಿಮಗೆ ನೆನಪಿದೆಯೇ': ಪ್ರತಿವರ್ಷ 15-20 ಲಕ್ಷ ಉದ್ಯೋಗ ಸೃಷ್ಟಿ. ಉದ್ಯಮಗಳಲ್ಲಿ ಉದ್ಯೋಗ ನೀಡುವ ಸಾಮಥ್ರ್ಯ ಶೇಕಡಾ 50ರಷ್ಟು ಹೆಚ್ಚಳ. ಬಿಪಿಎಲ್ ಕುಟುಂಬದ ಪದವೀಧರರಿಗೆ 3ಲಕ್ಷದವರೆಗೆ ಬಡ್ಡಿರಹಿತ ಸಾಲ. 500 ಕೋಟಿ ರೂ.ವೆಚ್ಚದಲ್ಲಿ ‘ಸಣ್ಣ ವ್ಯಾಪಾರಿಗಳ ಕಲ್ಯಾಣ ನಿಧಿ’. ಈ ಭರವಸೆಗಳು ನೆನಪಿದೆಯೇ ಯಡಿಯೂರಪ್ಪ ಅವರೇ ಎಂದು ಸಿದ್ದರಾಮಯ್ಯ ಕೇಳಿದರು.
‘ಕಾಲೇಜು ವಿದ್ಯಾರ್ಥಿಗಳಿಗೆಲ್ಲರಿಗೂ ಲ್ಯಾಪ್‍ಟಾಪ್, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 1,500 ಕೋಟಿ ರೂ.ವಿದ್ಯಾರ್ಥಿ ವೇತನ, ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ 3 ಸಾವಿರ ಕೋಟಿ ರೂ.ವೆಚ್ಚದ ವಿದ್ಯಾರ್ಥಿ ವೇತನ. ಇದು ರಾಜ್ಯ ಬಿಜೆಪಿ ಪ್ರಣಾಳಿಕೆಯಲ್ಲಿರುವ ಭರವಸೆಗಳು' ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.
‘ಮಹಿಳೆಯರಿಗೆ ಶೇ.1ರ ಬಡ್ಡಿದರದಲ್ಲಿ 2ಲಕ್ಷ ರೂ.ಸಾಲ. ಬಿಪಿಎಲ್ ಮಹಿಳೆಯರಿಗೆ ಸ್ಮಾರ್ಟ್ ಫೋನ್, ಹೆಣ್ಣುಮಕ್ಕಳಿಗೆ ಉಚಿತ ಸ್ಯಾನಿಟರಿ ನ್ಯಾಪ್‍ಕಿನ್. ಮದುವೆಯಾಗುವ ಹೆಣ್ಣುಮಕ್ಕಳಿಗೆ ಮೂರು ಗ್ರಾಂ ಚಿನ್ನದ ತಾಳಿ ಮತ್ತು 25 ಸಾವಿರ ರೂ., 10ಸಾವಿರ ಕೋಟಿ ರೂ.ವೆಚ್ಚದಲ್ಲಿ ‘ಸ್ತ್ರೀ ಉನ್ನತಿ ನಿಧಿ’. ಇದರಲ್ಲಿ ಯಾವ ಭರವಸೆ ಈಡೇರಿದೆ?' ಎಂದು ಅವರು ಉಲ್ಲೇಖಿಸಿದರು.
‘ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲಮನ್ನಾ ಮಾಡದೆ ಇದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದಿರಿ. ಬಿಎಸ್‍ವೈ ಅವರೇ, ನಿಮ್ಮ ಪೊಳ್ಳು ಬೆದರಿಕೆಗೆ ಬೆದರುವವ ನಾನಲ್ಲ. ಆದರೆ ರೈತನ ಮಗನಾದ ನನಗೆ ರೈತರ ಕಷ್ಟಗಳು ಗೊತ್ತು. ಇದಕ್ಕಾಗಿ ನಾನು ಸಾಲಮನ್ನಾ ಮಾಡಿದೆ' ಎಂದು ಅವರು ತಿಳಿಸಿದರು.
‘ವಚನಭ್ರಷ್ಟತೆ ಎನ್ನುವುದು ಬಿಜೆಪಿಯವರ ಹುಟ್ಟುಗುಣ. ಕಳೆದ ಬಾರಿ ಹಸಿರುಶಾಲು ಹಾಕಿಕೊಂಡು ಅಧಿಕಾರಕ್ಕೆ ಬಂದಾಗ ಸಾಲಮನ್ನಾ ಮಾಡಬೇಕೆಂದು ರೈತರು ಕೇಳಿದರೆ ‘ನಾನೇನು ನೋಟು ಪ್ರಿಂಟಿಂಗ್ ಮೆಷಿನ್ ಇಟ್ಟುಕೊಂಡಿದ್ದೇನಾ?' ಎಂದು ಕೇಳಿದವರು ನೀವಲ್ಲವೆ' ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
‘ಕೃಷಿಗೆ ಸಂಬಂಧಿಸಿದ ಎಲ್ಲ ಯೋಜನೆಗಳ ಉಸ್ತುವಾರಿಗೆ ಮುಖ್ಯಮಂತ್ರಿ ಅಧೀನದಲ್ಲಿ ಪ್ರತ್ಯೇಕ ‘ರೈತಬಂಧು ಇಲಾಖೆ’ ರಚಿಸುವುದಾಗಿ ಹೇಳಿದ್ದೀರಿ? ಎಲ್ಲಿದೆ ಆ ಇಲಾಖೆ. ರೈತರಿಗೆ ನೀಡಿರುವ ಈ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದೀರಿ ಎಂದು ಹೇಳುವ ಧೈರ್ಯ ನಿಮಗಿದೆಯೇ ಯಡಿಯೂರಪ್ಪನವರೇ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
‘ರೈತರಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ. ನೀರಾವರಿಗೆ 1.50 ಲಕ್ಷ ಕೋಟಿ ರೂ.ಅನುದಾನ, ಪ್ರತಿವರ್ಷ 1 ಸಾವಿರ ರೈತರಿಗೆ ಇಸ್ರೇಲ್, ಚೀನಾ ಪ್ರವಾಸ. ಎಲ್ಲಿದೆ ಬೆಂಬಲ ಬೆಲೆ? ಎಲ್ಲಿದೆ ರೈತರ ಪ್ರವಾಸ? ಅಧಿಕಾರ ವಹಿಸಿಕೊಂಡ 24 ಗಂಟೆಯೊಳಗೆ ಮಹದಾಯಿ ಸಮಸ್ಯೆ ಬಗೆಹರಿಸುವುದಾಗಿ ಬಿಜೆಪಿ ಹೇಳಿತ್ತು, ಏನಾಯಿತು?' ಎಂದು ಕೇಳಿದರು.
‘ಬೆಳೆಗಳ ಬೆಲೆ ಕುಸಿತ ತಡೆಯಲು 5 ಸಾವಿರ ಕೋಟಿ ರೂ. ವೆಚ್ಚದ ‘ರೈತಬಂಧು ಮಾರುಕಟ್ಟೆ ಮಧ್ಯಪ್ರವೇಶ ನಿಧಿ’, ರೈತರ ಮಕ್ಕಳ ಶಿಕ್ಷಣಕ್ಕೆ ನೂರು ಕೋಟಿ ರೂ.ಗಳ ‘ರೈತಬಂಧು ವಿದ್ಯಾರ್ಥಿ ವೇತನ ನಿಧಿ. ಬಿಜೆಪಿ ಪಕ್ಷದ ಪ್ರಣಾಳಿಕೆಯ ಈ ಭರವಸೆಗಳು ಈಡೇರಿವೆಯೇ?' ಎಂದು ಸಿದ್ದರಾಮಯ್ಯ ಕಿಡಿಕಾರಿದರು.
‘ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸಹಕಾರಿ ಸಂಸ್ಥೆಗಳಲ್ಲಿರುವ ಒಂದು ಲಕ್ಷ ರೂ.ವರೆಗಿನ ರಾಜ್ಯದ ಎಲ್ಲ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ ಎನ್ನುವುದು ನಿಮ್ಮ ಪ್ರಣಾಳಿಕೆಯ ಮೊದಲ ಭರವಸೆ. ಆ ಭರವಸೆಯನ್ನು ಈಡೇರಿಸದ ನಿಮಗೆ ಹಸಿರು ಶಾಲು ಹೊದ್ದುಕೊಂಡು ರೈತಪರ ಎಂದು ಹೇಳಿಕೊಳ್ಳುವ ಯಾವ ನೈತಿಕತೆ ಇದೆ ಹೇಳಿ ಯಡಿಯೂರಪ್ಪ ಅವರೇ?' ಸಿದ್ದರಾಮಯ್ಯ ಲೇವಡಿ ಮಾಡಿದರು.
‘ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಗೊಬ್ಬರ ಕೇಳಿದ ಇಬ್ಬರು ರೈತರಿಗೆ ಪೊಲೀಸರ ಮೂಲಕ ಗುಂಡಿಟ್ಟು ಅವರ ಜೀವ ತೆಗೆದಿರಿ. ಈ ಬಾರಿ ಐದು ರೈತವಿರೋಧಿ ಕಾನೂನುಗಳನ್ನು ಜಾರಿಗೆ ತಂದು ರೈತರೆಲ್ಲರ ಜೀವದ ಜೊತೆ ಜೀವನವನ್ನು ನಾಶಮಾಡಲು ಹೊರಟಿದ್ದೀರಿ' ಎಂದು ಆಕ್ರೋಶ ಹೊರಹಾಕಿದರು.
'ಆತ್ಮಸಾಕ್ಷಿ ಕೇಳಿಕೊಳ್ಳಿ':
‘ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ನೀವು ಅಧಿಕಾರಕ್ಕೆ ಬಂದು ಹದಿನೆಂಟು ತಿಂಗಳುಗಳಾಯಿತು. ಈ ಅವಧಿಯಲ್ಲಿ ನಿಮ್ಮ ಸರಕಾರದ ಸಾಧನೆಯನ್ನು ನಿಮ್ಮ ಪಕ್ಷದ ಪ್ರಣಾಳಿಕೆಯ ಜೊತೆ ಓದಿಕೊಳ್ಳಿ. ನಿಮಗೆ ಆತ್ಮಸಾಕ್ಷಿ ಎಂಬುದು ಎಲ್ಲಾದರೂ ಉಳಿದುಕೊಂಡಿದ್ದರೆ ನೀವು ಖಂಡಿತ ಒಂದು ಕ್ಷಣ ಆ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ' ಎಂದು ಎಂದು ತಿರುಗೇಟು ನೀಡಿದರು.
‘ಕಳೆದ ವರ್ಷ ನೀತಿ ಆಯೋಗವು ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ ನೀಡಿತ್ತು. ಇದನ್ನು ಬಿಜೆಪಿ ಸರಕಾರ ತನ್ನ ಸಾಧನೆ ಎಂದು ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿದೆ. ಕೌಶಲ್ಯಾಭಿವೃದ್ಧಿ ಇಲಾಖೆ ಸ್ಥಾಪನೆ ಮಾಡಿ, ವಾರ್ಷಿಕ 5ಲಕ್ಷ ಮಂದಿಗೆ ಕೌಶಲ್ಯ ತರಬೇತಿ ನೀಡಿದ್ದು ನಮ್ಮ ಸರಕಾರ. ಇದರಲ್ಲಿ ಬಿಜೆಪಿಯವರ ಸಾಧನೆ ಏನಿದೆ?' ಎಂದರು.
‘ರಾಜ್ಯಪಾಲರಿಂದ ಸರಕಾರ ಮಾಡಿಸಿದ್ದ ಭಾಷಣದಲ್ಲಿ ಒಂದಷ್ಟು ಸುಳ್ಳಿನ ಕಂತೆಗಳಿವೆ, ಒಂದಷ್ಟು ತಪ್ಪು ಮಾಹಿತಿಗಳಿವೆ, ಜೊತೆಗೆ ಸರಕಾರದ ಮಾನ ಉಳಿಸಿಕೊಳ್ಳಲು ನಿರ್ಲಜ್ಜವಾಗಿ ಹೇಳಿಕೊಂಡ ಹಿಂದಿನ ನಮ್ಮ ಸರಕಾರದ ಸಾಧನೆಗಳಿವೆ. ಇದನ್ನು ಹೊರತುಪಡಿಸಿ ಸತ್ಯನೂ ಇಲ್ಲ, ಸತ್ವವೂ ಇಲ್ಲ'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ