ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯುವುದು ಸರಿಯೇ?: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಫೆ. 3: ‘ಅಕ್ರಮ ಡಿನೋಟಿಫಿಕೇಷನ್‍ಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಸುಪ್ರೀಂ ಕೋರ್ಟ್‍ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಅಕ್ರಮ ಆರೋಪದ ತನಿಖೆ ಎದುರಿಸುತ್ತಿರುವ ವ್ಯಕ್ತಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆ ಎಂಬುದು ರಾಜ್ಯದ ಜನರ ಪ್ರಶ್ನೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಮೇಲೆ ಮಾತನಾಡಿದ ಅವರು, ‘ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಕ್ಷೀರಧಾರೆ ಯೋಜನೆ ಮೂಲಕ ಪ್ರತೀ ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹಧನ ನೀಡಿ, ಹೈನುಗಾರಿಕೆಗೆ ಉತ್ತೇಜನ ನೀಡಿದ್ದು ನಮ್ಮ ಸರಕಾರ. ಇಂದು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಹಾಲು ಉತ್ಪಾದನೆ ಆಗುತ್ತಿದ್ದರೆ ಅದಕ್ಕೆ ಕಾಂಗ್ರೆಸ್ ಸರಕಾರದ ಯೋಜನೆಗಳೂ ಕಾರಣ' ಎಂದು ಆಕ್ಷೇಪಿಸಿದರು.
‘ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಜಾರಿಗೆ ತಂದಿದ್ದ ಆನ್‍ಲೈನ್ ಮಾರುಕಟ್ಟೆಯಿಂದಾಗಿ ರೈತರ ಆದಾಯ ಶೇ.38ರಷ್ಟು ಹೆಚ್ಚಿದೆ ಎಂದು ಕೇಂದ್ರ ನೀತಿ ಆಯೋಗವೇ ಶಹಬ್ಬಾಸ್ ಗಿರಿ ಕೊಟ್ಟಿತ್ತು. ಇಂತಹ ಒಂದೇ ಒಂದು ರೈತಪರ ಕಾರ್ಯಕ್ರಮವನ್ನು ಹದಿನೆಂಟು ತಿಂಗಳಲ್ಲಿ ಯಡಿಯೂರಪ್ಪ ಸರಕಾರ ಜಾರಿಗೆ ತಂದಿದೆಯಾ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘ಮೂರು ಲಕ್ಷ ರೂ.ವರೆಗೆ ಬಡ್ಡಿ ರಹಿತ ಕೃಷಿ ಸಾಲ, ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರೂ.ವರೆಗೆ ಕೃಷಿ ಸಾಲ ನೀಡಿದ್ದೆ. ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂ.ವರೆಗಿನ ಸಾಲಮನ್ನಾ ಮಾಡಿದ್ದೆ. ಇದರಿಂದಾಗಿ ರಾಜ್ಯದ 22,27,506 ರೈತರ ಒಟ್ಟು 8,165 ಕೋಟಿ ರೂ.ಸಾಲ ಮನ್ನಾ ಆಗಿದೆ'.
‘ಬಿಜೆಪಿಯವರದು ನುಡಿದಂತೆ ಎಂದೂ ನಡೆಯದ ವಚನಭ್ರಷ್ಟ, ಜನದ್ರೋಹಿ, ಆತ್ಮವಂಚಕ ಸರಕಾರ. ಯಡಿಯೂರಪ್ಪ ಅವರೇ, ಈ ಆರೋಪವನ್ನು ನಿರಾಕರಿಸುವುದಾದರೆ ನಿಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟು ಸಾರ್ವಜನಿಕ ಚರ್ಚೆಯನ್ನು ಏರ್ಪಡಿಸಿ. ಈ ಸವಾಲನ್ನು ನೀವು ಸ್ವೀಕರಿಸುವುದಾದರೆ ದಿನವನ್ನು ನೀವೇ ನಿಗದಿಪಡಿಸಿ. ನಾನು ಚರ್ಚೆಗೆ ಸಿದ್ಧನಿದ್ದೇನೆ' ಎಂದು ಸಿದ್ದರಾಮಯ್ಯ ಆಹ್ವಾನಿಸಿದರು.
‘ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಪ್ರಧಾನಿ ಮೋದಿ ಅವರೂ ಸೇರಿದಂತೆ ಯಾರಾದರೂ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿದವರು ಇದ್ದಾರಾ? ಆಗಲೂ ಹೇಳಿದ್ದೆ, ಈಗಲೂ ಹೆಮ್ಮೆಯಿಂದ ಹೇಳುತ್ತೇನೆ, ನಮ್ಮದು ನುಡಿದಂತೆ ನಡೆದ ಸರಕಾರ' ಎಂದು ಸಿದ್ದರಾಮಯ್ಯ ಹೇಳಿದರು.
‘ನಮ್ಮ ಪಕ್ಷ 165 ಭರವಸೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸದ ಮರುಗಳಿಗೆಯಲ್ಲಿಯೇ ಐದು ಭರವಸೆಗಳನ್ನು ಜಾರಿಗೆ ತಂದಿದ್ದೆ. ಐದು ವರ್ಷಗಳ ಅವಧಿಯಲ್ಲಿ ಎಲ್ಲ 165 ಭರವಸೆಗಳನ್ನು ಮಾತ್ರವಲ್ಲ, ಹೆಚ್ಚುವರಿ 25 ಯೋಜನೆಗಳನ್ನು ಜಾರಿಗೆ ತಂದಿದ್ದೆ. ಬಿಜೆಪಿಯವರ ಹಾಗೆ ಬಾಯಿ ಬಡಾಯಿ ಅಲ್ಲ' ಎಂದು ವಾಗ್ದಾಳಿ ನಡೆಸಿದರು.
‘ಚುನಾವಣಾ ಕಾಲದ ಪ್ರಣಾಳಿಕೆ ಎನ್ನುವುದು ಜನತೆಗೆ ನೀಡುವ ವಚನ. ಗೆದ್ದ ಮೇಲೆ ಮೂಲೆಗೆಸೆದು ಮರೆತುಬಿಡುವ ಕಾಗದದ ಕಂತೆ ಅಲ್ಲ. ಗೆದ್ದು ಅಧಿಕಾರಕ್ಕೆ ಬಂದ ನಂತರ ಆ ಪ್ರಣಾಳಿಕೆಗೆ ಬದ್ಧತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಇದನ್ನು ಎದೆತಟ್ಟಿ ಹೇಳುವ ನೈತಿಕತೆ ನನಗಿದೆ' ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
'ಪರಿವಾರದ ಅಜೆಂಡಾ': ‘ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಸಂಘ ಪರಿವಾರದ ಅಜೆಂಡಾ. ಇದು ಗೋವುಗಳ ರಕ್ಷಣೆಗಾಗಿ ತಂದಿರುವ ಕಾಯ್ದೆ ಖಂಡಿತ ಅಲ್ಲ, ಇದು ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ ನಡೆಸುವ ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ತಂದಿರುವ ಕಾಯ್ದೆ ಅಷ್ಟೇ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
‘ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿಯೊಂದನ್ನು ಹೊರತುಪಡಿಸಿ ಉಳಿದ ಐದು ಕೃಷಿ ಸಂಬಂಧಿ ಕಾನೂನುಗಳ ಬಗ್ಗೆ ನಿಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖವೇ ಇಲ್ಲ. ಹೀಗಿದ್ದಾಗ ಇದನ್ನು ಜಾರಿಗೆ ತರಲು ನಿಮಗೆ ಜನಾದೇಶ ಎಲ್ಲಿದೆ ಯಡಿಯೂರಪ್ಪನವರೇ?' ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಸ್ಫೋಟಗೊಳ್ಳಲಿದೆ ಎಚ್ಚರ: ‘ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ, ಕೃಷಿಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆಗೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ಸೇರಿದಂತೆ ಈ ಐದು ಕಾನೂನುಗಳ ವಿರುದ್ಧ ರಾಜ್ಯದ ರೈತ ಸಮುದಾಯ ಬೀದಿಯಲ್ಲಿ ಹೋರಾಟ ನಡೆಸುತ್ತಿದೆ. ರೈತರು ಸ್ಫೋಟಗೊಳ್ಳುವ ಸ್ಥಿತಿಯಲ್ಲಿದ್ದು, ಅವರೇನಾದರೂ ಸ್ಫೋಟಗೊಂಡರೆ ನೀವೆಲ್ಲ ಕೊಚ್ಚಿಕೊಂಡು ಹೋಗಲಿದ್ದೀರಿ' ಎಂದು ಸಿದ್ದರಾಮಯ್ಯ ಎಚ್ಚರಿಸಿದರು.
‘ರಾಜ್ಯದಲ್ಲಿ ಕೊರೋನ ರೋಗದ ಹಾವಳಿಯಿಂದ ಜನ ಸಾಯುತ್ತಿದ್ದಾಗ, ಇಡೀ ರಾಜ್ಯದಲ್ಲಿ ಸೂತಕದ ವಾತಾವರಣ ಇದ್ದಾಗ, ಜನ ಬೀದಿಗೆ ಕಾಲಿಡಲು ಹೆದರುತ್ತಿದ್ದ ಕಾಲದಲ್ಲಿ ಬಿಜೆಪಿ ಪಕ್ಷ ತರಾತುರಿಯಿಂದ ಪ್ರಜಾತಾಂತ್ರಿಕ ವಿಧಿ ವಿಧಾನಗಳನ್ನು ಗಾಳಿಗೆ ತೂರಿ, ಅಧ್ಯಾದೇಶ (ಸುಗ್ರೀವಾಜ್ಞೆ) ಮೂಲಕ ಜಾರಿಗೆ ತಂದದ್ದು ರೈತರ ಪಾಲಿಗೆ ಮರಣಶಾಸನಗಳಾದ ಐದು ಕಪ್ಪು ಕಾನೂನುಗಳು' ಎಂದು ಟೀಕಿಸಿದರು.
‘ರೈತರು ಮಾತ್ರವಲ್ಲ ಮಹಿಳೆಯರು, ಯುವಕರು, ಕಾರ್ಮಿಕರು, ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು.. ಹೀಗೆ ಯಾವುದೇ ಜನವರ್ಗಕ್ಕೆ ಪ್ರಣಾಳಿಕೆಯಲ್ಲಿ ನೀಡಿರುವ ಯಾವುದೇ ಭರವಸೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಈಡೇರಿಸಿಲ್ಲ' ಎಂದು ಸಿದ್ದರಾಮಯ್ಯ ಆರೋಪಿಸಿದರು.
‘ದೇಶದ ರೈತರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಅತಿವೃಷ್ಟಿ ಮತ್ತು ಕೊರೋನ ಹಾವಳಿಯ ಪ್ರಕೃತಿ ವಿಕೋಪ, ಇನ್ನೊಂದೆಡೆ ಬಿಜೆಪಿ ಸರಕಾರದ ಕೃಷಿ ವಿರೋಧಿ ಕಾನೂನುಗಳ ಮಾನವ ನಿರ್ಮಿತ ವಿಕೋಪ. ಕಷ್ಟ-ನಷ್ಟಗಳಲ್ಲಿ ಬೆಂದು ಹೋಗಿರುವ ರೈತರು ದೇಶಾದ್ಯಂತ ಬೀದಿಗಿಳಿದಿದ್ದಾರೆ. ಇಡೀ ದೇಶವೇ ಜ್ವಾಲಾಮುಖಿಯಂತಾಗಿದೆ, ಅದು ಯಾವಾಗ ಸಿಡಿಯುತ್ತೋ ಗೊತ್ತಿಲ್ಲ'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ