ರಕ್ಷಣಾ ವಲಯದ ಆಧುನೀಕರಣಕ್ಕೆ 130 ಶತಕೋಟಿ ಡಾಲರ್ ವೆಚ್ಚ: ರಾಜನಾಥ್ ಸಿಂಗ್

Update: 2021-02-03 13:46 GMT

ಬೆಂಗಳೂರು, ಫೆ.3: ಭಾರತ ಸರಕಾರವು ‘ಆತ್ಮನಿರ್ಭರ್ ಭಾರತ್’ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂಬರುವ ಏಳು-ಎಂಟು ವರ್ಷಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ಬೃಹತ್ ಮಟ್ಟದಲ್ಲಿ ದೇಶಿಯ ಉತ್ಪಾದನೆಗೆ ಒತ್ತು ನೀಡುವ ಮೂಲಕ ರಕ್ಷಣಾ ವಲಯದ ಆಧುನೀಕರಣಕ್ಕೆ ಸುಮಾರು 130 ಶತಕೋಟಿ ಡಾಲರ್ ವೆಚ್ಚ ಮಾಡಲು ಮುಂದಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಬುಧವಾರ ನಗರದ ಹೊರವಲಯದಲ್ಲಿರುವ ಯಲಹಂತ ವಾಯುನೆಲೆಯಲ್ಲಿ ಆಯೋಜಿಸಲಾಗಿದ್ದ ‘ಏರೋ ಇಂಡಿಯಾ-2021’ ಹೈಬ್ರಿಡ್ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು 2014ರ ನಂತರ ರಫ್ತು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‍ಡಿಐ)ಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಹಲವಾರು ಬಗೆಯ ಸುಧಾರಣೆಗಳನ್ನು ಜಾರಿಗೆ ತಂದಿದೆ ಎಂದರು.

ದೇಶದ ರಕ್ಷಣಾ ವಿಷಯದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸಬೇಕೆಂಬ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಹೀಗಾಗಿ, 2024ರ ವೇಳೆ ಸುಮಾರು 35 ಸಾವಿರ ಕೋಟಿ ರೂ.ಗಳ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದೆ. ಭಾರತೀಯ ತಯಾರಿಸಿರುವ ಸಂಪೂರ್ಣ ಸ್ವದೇಶಿ ‘ತೇಜಸ್’ ಲಘು ಯುದ್ಧವಿಮಾನಕ್ಕೆ ಸಾಕಷ್ಟು ಬೇಡಿಕೆಯಿದೆ. ಈಗಾಗಲೇ 83 ತೇಜಸ್ ವಿಮಾನಗಳಿಗಾಗಿ ಎಚ್‍ಎಎಲ್‍ಗೆ ಆದೇಶ ನೀಡಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಚೀನಾಗೆ ತಿರುಗೇಟು: ಪೂರ್ವ ಲಡಾಕ್‍ನ ಗಡಿಭಾಗದಲ್ಲಿ ಚೀನಾ ನಡೆಸುತ್ತಿರುವ ಉಪಟಲದಿಂದಾಗಿ ಸೇನೆ ನಿಯೋಜನೆ ಮಾಡಿದ್ದರ ಬಗ್ಗೆ ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ದೇಶದ ಗಡಿಭಾಗದಲ್ಲಿರುವ ಯಥಾಸ್ಥಿತಿಯನ್ನು ಬದಲಾಯಿಸಲು ನೆರೆ ರಾಷ್ಟ್ರ ಚೀನಾ ಸತತ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ಭಾರತವು ಎಚ್ಚರಿಕೆಯಿಂದಿದೆ. ನಮ್ಮ ದೇಶದ ಸಮಗ್ರತೆಯನ್ನು ರಕ್ಷಿಸಲು ನಾವು ಸರ್ವ ಸನ್ನದ್ಧವಾಗಿದ್ದೇವೆ ಎಂದರು.

ಅನಗತ್ಯವಾಗಿ ಭಾರತೀಯರನ್ನು ಕೆಣಕಲು ಬಂದರೆ ಅಂತಹ ಶಕ್ತಿಗಳನ್ನು ನಿಗ್ರಹಿಸಲು ನಾವು ಸಿದ್ಧವಾಗಿದ್ದೇವೆ. ಪೂರ್ವ ಲಡಾಕ್‍ನಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸಲು ಭಾರತ ಹಾಗೂ ಚೀನಾದೇಶಗಳು ಸೇನೆ ಹಾಗೂ ರಾಯಭಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದರೂ ಯಾವುದೆ ಪ್ರಗತಿ ಕಂಡು ಬರುತ್ತಿಲ್ಲ ಎಂದು ರಾಜನಾಥ್ ಸಿಂಗ್ ಬೇಸರ ವ್ಯಕ್ತಪಡಿಸಿದರು.

ಜಗತ್ತಿನ ಮೊಟ್ಟಮೊದಲ ಹೈಬ್ರೀಡ್ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ 2021 ನಮ್ಮ ದೇಶದ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ. ದೇಶದ ಗಡಿಯಲ್ಲಿ ಅಪಾಯ ಒಡ್ಡುತ್ತಿರುವ ಉಗ್ರಗಾಮಿ ಚಟುವಟಿಕೆಗಳನ್ನು ಮತ್ತ ಹಾಕಲು ನಮ್ಮ ಸರಕಾರ ಹಾಗೂ ಸೇನೆ ಪಣತೊಟ್ಟಿದೆ. ಮಾಲ್ಡೀವ್ಸ್, ಉಕ್ರೇನ್, ಮಡಗಾಸ್ಕರ್, ಗಿನಿ ದೇಶಗಳ ರಕ್ಷಣಾ ಸಚಿವರು ಈ ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದಾರೆ ಎಂದು ಅವರು ಹೇಳಿದರು.

ವಿದೇಶಗಳಿಗೆ ಕೋವಿಡ್ ಲಸಿಕೆ ರಫ್ತು: ಕೋವಿಡ್ ಸೋಂಕಿನಿಂದ ಇಡೀ ಪ್ರಪಂಚ ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಸಿದ್ಧಪಡಿಸಲಾದ ಎರಡು ಲಸಿಕೆಗಳು ಈಗ ವಿದೇಶಗಳಿಗೆ ರಫ್ತು ಆಗಿ, ಅಲ್ಲಿಯೂ ಜನರ ಜೀವ ರಕ್ಷಿಸುವ ಕೆಲಸ ಮಾಡುತ್ತಿವೆ. ನಮ್ಮ ದೇಶದಲ್ಲಿ ಆರಂಭಿಕ ಹಂತದಲ್ಲಿ ಸುಮಾರು 217 ದಶಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡುವ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಕೊರೋನ ಅಟ್ಟಹಾಸದ ನಡುವೆಯೂ ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆಗೊಂಡಿದೆ. ರಾಜ್ಯ ಸರಕಾರವು ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಎಲ್ಲ ಭದ್ರತೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಿದೆ. ಸತತ 13ನೇ ಬಾರಿ ಬೆಂಗಳೂರು ಏರೋ ಶೋ ಆತಿಥ್ಯವನ್ನು ವಹಿಸಿಕೊಂಡಿರುವುದು ಇಡೀ ರಾಜ್ಯದ ಜನತೆಗೆ ಹೆಮ್ಮೆಯ ಸಂಗತಿ ಎಂದರು.

ಈ ಅಂತರ್‍ರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನದಲ್ಲಿ 540 ಪ್ರದರ್ಶಕರು, 77 ವಿದೇಶಿ ಪ್ರದರ್ಶಕರು 14 ದೇಶಗಳಿಂದ ಭಾಗಿಯಾಗಲಿದ್ದಾರೆ. ದೇಶದ ರಕ್ಷಣಾ ವಲಯಕ್ಕೆ ಕರ್ನಾಟಕದ ಕೊಡುಗೆ ಮಹತ್ತರವಾದದ್ದು. ರಾಜಧಾನಿ ಬೆಂಗಳೂರು ಹಲವಾರು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ರಕ್ಷಣಾ ಹಾಗೂ ಬಾಹ್ಯಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ತವರಾಗಿದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ನವೋದ್ಯಮಗಳ ತಾಣವಾಗಿದೆ ಎಂದು ಅವರು ಹೇಳಿದರು.

ದೇಶದ ಬಾಹ್ಯಾಕಾಶ ಕ್ಷೇತ್ರದ ರಫ್ತಿನಲ್ಲಿ ಶೇ.65ರಷ್ಟು ಹಾಗೂ ವಿಮಾನಗಳು ಹಾಗೂ ಹೆಲಿಕಾಪ್ಟರ್ ಉತ್ಪಾದನೆಯಲ್ಲಿ ಶೇ.67ರಷ್ಟು ಕೊಡುಗೆಯನ್ನು ನಮ್ಮ ರಾಜ್ಯ ನೀಡುತ್ತಿದೆ. ಇಡೀ ಜಗತ್ತಿನಲ್ಲಿ ಬಾಹ್ಯಕಾಶ ಕ್ಷೇತ್ರಕ್ಕೆ ಹೂಡಿಕೆಯನ್ನ ಆಕರ್ಷಿಸುತ್ತಿರುವ ವಿಶ್ವದ ಅತ್ಯುತ್ತಮ ಮೂರು ನಗರಗಳ ಪೈಕಿ ಬೆಂಗಳೂರು ಒಂದಾಗಿದೆ. 2008ರಲ್ಲಿ ರಾಜ್ಯ ಸರಕಾರವು ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನದ ಸಮೀಪ ದೇವನಹಳ್ಳಿಯಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬಾಹ್ಯಾಕಾಶ ಸಂಶೋಧನಾ ಪಾರ್ಕ್ ನಿರ್ಮಿಸಿದೆ ಎಂದು ಅವರು ತಿಳಿಸಿದರು.

ಇಡೀ ದೇಶದಲ್ಲಿ ಏರೋಸ್ಪೇಸ್ ನೀತಿಯನ್ನು ಘೋಷಿಸಿದ ಮೊದಲ ರಾಜ್ಯ ಕರ್ನಾಟಕ. ಇದರಡಿಯಲ್ಲಿ 14700 ಕೋಟಿ ರೂ.ಹೂಡಿಕೆ ಹಾಗೂ 10,600 ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಿದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಗಳು, ಇನ್ನುಳಿದಂತೆ ಐದು ಡೊಮೆಸ್ಟಿಕ್ ವಿಮಾನ ನಿಲ್ದಾಣಗಳ ಕಾರ್ಯನಿರ್ವಹಿಸುತ್ತಿವೆ. ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಉದ್ಯೋಗ ಭಾರತಿ ಹಾಗೂ ಐಎಂಎಸ್ ಫೌಂಡೇಷನ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಸೆ.27 ರಿಂದ 29ರವರೆಗೆ ಎಂಎಸ್‍ಎಂಇ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕ್ಸ್‍ಪೋ ಆಯೋಜಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಯ ಪ್ರಮುಖ ಅಧಿಕಾರಿಗಳು, ವಿದೇಶಿ ಗಣ್ಯರು ಉಪಸ್ಥಿತರಿದ್ದರು.

ಏರೋ ಇಂಡಿಯಾ ಅದ್ಭುತ ವೇದಿಕೆ: ಪ್ರಧಾನಿ
‘ಭಾರತವು ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಅಪರಿಮಿತ ಸಾಮಥ್ರ್ಯವನ್ನು ಹೊಂದಿದೆ. ಏರೋ ಇಂಡಿಯಾ ಈ ಪ್ರದೇಶಗಳಲ್ಲಿನ ಸಹಯೋಗಕ್ಕೆ ಅದ್ಭುತ ವೇದಿಕೆಯಾಗಿದೆ. ಈ ಕ್ಷೇತ್ರಗಳಲ್ಲಿ ಭಾರತವು ಭವಿಷ್ಯದ ಸುಧಾರಣೆಗಳನ್ನು ತಂದಿದೆ, ಇದು ಆತ್ಮನಿರ್ಭರರಾಗುವತ್ತ ಸಾಗಿರುವ ನಮಗೆ ಉತ್ತೇಜನ ನೀಡುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

500 ಸಂಸ್ಥೆಗಳಿಗೆ ಅನುಮತಿ
ರಕ್ಷಣಾ ಕ್ಷೇತ್ರದ ಉತ್ಪಾದನೆಗೆ ಸಂಬಂಧಿಸಿದ 500 ಸಂಸ್ಥೆಗಳಿಗೆ ಕೇಂದ್ರ ಸರಕಾರ ಅನುಮತಿ ನೀಡಿದೆ. ಇದರ ಜೊತೆಗೆ ಉತ್ತರಪ್ರದೇಶ ಮತ್ತು ತಮಿಳುನಾಡುನಲ್ಲಿ ರಕ್ಷಣಾ ಉತ್ಪಾದನಾ ಕೈಗಾರಿಕಾ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಭಾರತವು ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‍ನಲ್ಲಿ 190ನೇ ರ್ಯಾಂಕ್‍ನಿಂದ 63ನೆ ರ್ಯಾಂಕ್‍ಗೆ ಏರಿದೆ. ನಮ್ಮ ದೇಶದ ಕಾರ್ಯಸೂಚಿಗಳಿಂದಾಗಿ ವಿಶ್ವದ ಬೇರೆ ದೇಶಗಳು ಇದೀಗ ತಂತ್ರಜ್ಞಾನ ಹಸ್ತಾಂತರ ಮಾಡಲು ಮುಂದಾಗುತ್ತಿವೆ.
-ರಾಜನಾಥ್ ಸಿಂಗ್, ರಕ್ಷಣಾ ಸಚಿವ

 
ಕರ್ನಾಟಕವು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಬಸವಣ್ಣನವರಂತಹ ಮಹಾತ್ಮರು, ಸೂಫಿ ಸಂತರು, ಸರ್.ಎಂ.ವಿಶ್ವೇಶ್ವರಯ್ಯ ಅವರಂತಹ ಪ್ರಮುಖರಿಂದ ಪ್ರೇರಿತವಾದ ರಾಜ್ಯವಿದು. ಈ ಪ್ರಮುಖರು ದೇಶ ಹಾಗೂ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪರಿಮಿತವಾದದ್ದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News