ಸಾರಿಗೆ ಸಂಸ್ಥೆಗಳ ಆದಾಯ ಇಂಧನಕ್ಕೆ ಸಾಕಾಗುತ್ತಿಲ್ಲ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

Update: 2021-02-03 14:57 GMT

ಬೆಂಗಳೂರು, ಫೆ. 3: ‘ರಾಜ್ಯದಲ್ಲಿ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಇಲಾಖೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಬಸ್ ಸಂಚಾರದಿಂದ ಬರುವ ಹಣ ಇಂಧನಕ್ಕೆ ಸಾಕಾಗುತ್ತಿಲ್ಲ. ನೌಕರರಿಗೆ ವೇತನ ನೀಡಲು ಆಗದ ಪರಿಸ್ಥಿತಿ ಇದೆ' ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಎಚ್.ಡಿ.ರೇವಣ್ಣ ಪರವಾಗಿ ಎ.ಟಿ. ರಾಮಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸದ್ಯಕ್ಕೆ ನಮಗೆ ಬರುತ್ತಿರುವ ಆದಾಯದಲ್ಲಿ ವಾಹನಗಳಿಗೆ ಇಂಧನ ಭರ್ತಿ ಮಾಡಿಕೊಳ್ಳಬಹುದೇ ಹೊರತು ನೌಕರರಿಗೆ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಇಲಾಖೆಯ ದುಸ್ಥಿತಿಯನ್ನು ಬಿಚ್ಚಿಟ್ಟರು.

ಕೋವಿಡ್ ಕಾರಣದಿಂದ ಬಸ್ ಸಂಚಾರ ಸ್ಥಗಿತಗೊಂಡಿತ್ತು. ನಿಗಮಗಳಿಂದಲೂ ವೇತನ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಜ್ಯ ಸರಕಾರವೇ 1,760 ಕೋಟಿ ರೂ.ಹಣ ಬಿಡುಗಡೆ ಮಾಡಿದ್ದು, ಡಿಸೆಂಬರ್ ತಿಂಗಳಿನಲ್ಲಿ ಅರ್ಧ ವೇತನವನ್ನು ನೀಡಲಾಗಿದೆ. ಜನವರಿ ತಿಂಗಳ ವೇತನವನ್ನು ಇನ್ನೂ ನೀಡಿಲ್ಲ. ಹೀಗಾಗಿ ಹಾಸನ ನಗರದಲ್ಲಿರುವ ಪ್ರಾದೇಶಿಕ ಕಾರ್ಯಾಗಾರವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಸದ್ಯಕ್ಕೆ ಅನುದಾನ ನೀಡಲು ಸಾಧ್ಯವಿಲ್ಲ. ಆರ್ಥಿಕ ಇಲಾಖೆ ಹಣ ಬಿಡುಗಡೆ ಮಾಡಿದರೆ ಕಾಮಗಾರಿಗೆ ಅನುದಾನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಸವದಿ ಉತ್ತರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎ.ಟಿ. ರಾಮಸ್ವಾಮಿ, ಸರಕಾರ ಮೇಲೋ ಅಥವಾ ಹಣಕಾಸು ಇಲಾಖೆ ಮೇಲೋ ಮೊದಲು ಸ್ಪಷ್ಟಣೆ ನೀಡಿ. ಎಲ್ಲಕ್ಕೂ ಹಣಕಾಸು ಇಲಾಖೆ ನೆಪದಲ್ಲಿ ಕಾಮಗಾರಿ ಸ್ಥಗಿತ ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಸವದಿ, ಇದು ಬೀಜ ಮೊದಲೋ ಅಥವಾ ಮರ ಮೊದಲೋ ಎಂದು ಪ್ರಶ್ನಿಸಿದಂತೆ. ಆದರೆ, ಸದ್ಯಕ್ಕೆ ಹಣವಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯರೊಬ್ಬರು ಸರಕಾರವಿಲ್ಲದೆ ಹಣಕಾಸು ಇಲಾಖೆ ಇಲ್ಲ. ಸಚಿವರ ಹೋಲಿಕೆ ಸರಿಯಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News