"ನೀನು ಇಲ್ಲೇ ಇರ್ತೀಯೋ ನಮ್ಮ ಜೊತೆಗೆ ಬರ್ತೀಯೋ..!"
ಬೆಂಗಳೂರು, ಫೆ. 3: ‘ವಿಸ್ಕಿ ಕುಡಿತ, ಸ್ವರ್ಗ-ನರಕ, ಪಾಪ-ಪುಣ್ಯ ಎಲ್ಲವನ್ನು ಇಲ್ಲೇ ಅನುಭವಿಸಬೇಕು. ನಾನು ಮನುಷ್ಯ ಬಳಕೆ ಮಾಡುವ ಎಲ್ಲವನ್ನು ಅನುಭವಿಸಿದ್ದೇನೆ, ನೀವು ಅನುಭವಿಸಿದ್ದೀಯೋ ಇಲ್ಲವೋ, ಇಲ್ಲೇ ಇರ್ತೀಯೋ ಅಥವಾ ನಮ್ಮ ಜೊತೆಗೆ ನೀನು ಬರ್ತೀಯೋ?' ಎಂದು ಸಿದ್ದರಾಮಯ್ಯ, ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ಪ್ರಶ್ನಿಸಿದ್ದು ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ಸ್ವರ್ಗ-ನರಕ, ಪಾಪ-ಪುಣ್ಯಗಳಲ್ಲಿ ನನಗೆ ನಂಬಿಕೆ ಇಲ್ಲ. ಆದರೆ, ಮಾಜಿ ಸಚಿವ ಆರ್.ಎಲ್.ಜಾಲಪ್ಪ ಹೇಳುತ್ತಿದ್ದರು ಎಲ್ಲವನ್ನು ಅನುಭವಿಸದಿದ್ದರೆ ಅಲ್ಲಿಗೆ ನಿಮ್ಮನ್ನು ಸೇರಿಸಿಕೊಳ್ಳದೆ ಹಿಂದಕ್ಕೆ ಕಳುಹಿಸುತ್ತಾರೆ ಎಂದು ನೆನಪು ಮಾಡಿಕೊಂಡರು. ‘ಸವದಿ ನೀನು ನಮ್ಮ ಕ್ಯಾಟಗರಿಯೇ' ಎಂದು ಚಟಾಕಿ ಹಾರಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ, ‘ನಾನು ನಿಮ್ಮೊಂದಿಗೆ ಬರುವವನೆ' ಎಂದು ಮಸಾಲೆ ಬೆರೆಸಿದರು. ‘ಪಾಪ ಸುರೇಶ್ ಕುಮಾರ್ ನಮ್ಮೊಂದಿಗೆ ಇಲ್ಲ' ಎಂದರು ಸಿದ್ದರಾಮಯ್ಯ. ಈ ವೇಳೆ ಎದ್ದು ನಿಂತ ಸಚಿವ ಸುರೇಶ್ ಕುಮಾರ್, ‘ಪಾಪ ಏಕೆ?' ಎಂದು ಪ್ರಶ್ನಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಹಿರಿಯ ಸದಸ್ಯ ರಮೇಶ್ ಕುಮಾರ್, ‘ಪಾಪ ಅಂದ್ರೆ ಕೆಟ್ಟದನ್ನು ಮಾಡಲು ಬರದವರು. ಸ್ವತಃ ತಿನ್ನಲು ಬರುವುದಿಲ್ಲ. ಯಾರಾದರೂ ಅವರಿಗೆ ತಿನ್ನಿಸಿ, ಕುಡಿಸಬೇಕೆಂದು ಅರ್ಥ' ಎಂದು ಹಾಸ್ಯ ಚಟಾಕಿ ಹಾರಿದರು. ಇದರಿಂದ ಇಡೀ ಸದನ ನಗೆ ಅಲೆಯಲ್ಲಿ ತೇಲಿತು.
'ನೀನು ವಿಸ್ಕಿ ಕುಡಿದಿದ್ದೇಯೇನಪ್ಪಾ..': ‘ಲಿಂಬಾವಳಿ ನೀನು ವಿಸ್ಕಿ ಕುಡಿದಿದ್ದೇಯೇನಪ್ಪ' ಎಂದು ಸಿದ್ದರಾಮಯ್ಯ ಪ್ರಶ್ನಿಸಿದಾಗ, ಸಚಿವ ಅರವಿಂದ ಲಿಂಬಾವಳಿ ಕ್ಷಣಕಾಲ ತಬ್ಬಿಬ್ಬಾದ ಪ್ರಸಂಗ ನಡೆಯಿತು. ‘ಇಲ್ಲ ಅಲ್ವಾ, ನಾವು ಶ್ರೀನಿವಾಸ್ ಮನೆಯಲ್ಲಿ ಸೇರಿದ್ವಲ್ಲಪ್ಪ' ಎಂದು ಜ್ಞಾಪಿಸಲು ಪ್ರಯತ್ನಿಸಿದರು.
‘ಅಲ್ಲಿ ನೀನು ಕುಡಿದಿರಲಿಲ್ವೇ' ಎಂದು ಕುಟುಕಿದಾಗ, ‘ನಿಮಗೆ ಗೊತ್ತಲ್ಲಾ ಸರ್' ಎಂದು ಅರವಿಂದ ಲಿಂಬಾವಳಿ ನಗುತ್ತಾ ಪ್ರತಿಕ್ರಿಯಿಸಿದರು. ‘ಒಮ್ಮೆ ಶ್ರೀನಿವಾಸ್ ಮನೆಯಲ್ಲಿ ಸೇರಿದ್ದೆವು ಅಲ್ವಾ, ಅಲ್ಲಿ ಕುಡಿದಿದ್ದಿಯಾ ಅಲ್ವಾ? ನನಗೆ ಗೊತ್ತಿಲ್ಲ' ಎಂದು ಮರುಪ್ರಶ್ನೆ ಹಾಕಿದ ಸಿದ್ದರಾಮಯ್ಯ ಇದರಿಂದ ಸದನದಲ್ಲಿ ಕೆಲಕಾಲ ಹಾಸ್ಯದ ಹೊಳೆ ಉಕ್ಕಿತು.