×
Ad

ನಿವೇಶನ ಕಲ್ಪಿಸಲು ಆಗ್ರಹಿಸಿ ಇಂದಿರಾಗಾಂಧಿ ಬಡಾವಣೆ ನಿವಾಸಿಗಳಿಂದ ಧರಣಿ

Update: 2021-02-03 22:14 IST

ಚಿಕ್ಕಮಗಳೂರು, ಫೆ.3: ನಗರ ಸಮೀಪದ ಇಂದಿರಾಗಾಂಧಿ ಬಡಾವಣೆಯ ಸ.ನಂ.32ರ ಸರಕಾರಿ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ನಗರಸಭೆ ಹಾಗೂ ಜಿಲ್ಲಾಡಳಿತ ಭರವಸೆ ನೀಡಿ ಅನೇಕ ವರ್ಷ ಕಳೆದಿದ್ದು, ಇದುವರೆಗೂ ನಿವೇಶನ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿ ಇಂದಿರಾಗಾಂಧಿ ಬಡಾವಣೆಯ ನಿವೇಶನಗಳು ಮಂಗಳವಾರ ದಿಢೀರ್ ಧರಣಿ ನಡೆಸಿದರು.

ಬಡಾವಣೆಯ ಸುಮಾರು 100ಕ್ಕೂ ಹೆಚ್ಚು ನಿವೇಶನ ರಹಿತ ಕುಟುಂಬಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡು ನಗರಸಭೆ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ತಮ್ಮ ಮನವಿ ಆಲಿಸಬೇಕೆಂದು ಪಟ್ಟು ಹಿಡಿದಿದ್ದರು.

ಈ ವೇಳೆ ಮಾತನಾಡಿದ ಮುಖಂಡರು ನಗರದ ಹೊರವಲಯದಲ್ಲಿರುವ ಇಂದಿರಾಗಾಂಧಿ ಬಡಾವಣೆಯ ಸ.ನಂ.32ರಲ್ಲಿರುವ ಸರಕಾರಿ ಜಾಗದಲ್ಲಿ ಬಡಾವಣೆಯ ಸುಮಾರು 300 ನಿವೇಶನ ರಹಿತ ಬಡ ಕುಟುಂಬಗಳು ಕಳೆದ 8 ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದರು. ಆದರೆ ಈಗ್ಗೆ ಎರಡು ವರ್ಷಗಳ ಹಿಂದೆ ನಿವೇಶನ ರಹಿತರಿದ್ದ ಜಾಗಕ್ಕೆ ಬಂದ ನಗರಸಭೆ ಅಧಿಕಾರಿಗಳು ಗುಡಿಸಲುಗಳನ್ನು ಕಿತ್ತುಹಾಕಿ ಬಡಕುಟುಂಬಗಳನ್ನು ಬೀದಿ ಪಾಲು ಮಾಡಿದ್ದರು. ಇದನ್ನು ಖಂಡಿಸಿ ತಾಲೂಕು ಕಚೇರಿ ಎದುರು 9 ದಿನಗಳ ಕಾಲ ಪ್ರತಿಭಟನೆ ಮಾಡಿದಾಗ ಸ್ಥಳಕ್ಕೆ ಬಂದ ಅಂದಿನ ಜಿಲ್ಲಾಧಿಕಾರಿ ಹಾಗೂ ಪೌರಾಯುಕ್ತರು ಎಲ್ಲ ನಿವೇಶನ ರಹಿತರಿಗೆ 15 ದಿನಗಳ ಒಳಗೆ ಬೇರೆಡೆ ನಿವೇಶನ ನೀಡುವುದಾಗಿ ಭರವಸೆ ನೀಡಿ ನಿವೇಶನ ರಹಿತರಿಂದ ಅಗತ್ಯ ದಾಖಲೆಗಳನ್ನು ಪಡೆದಿದ್ದರು ಎಂದು ಹೇಳಿದರು.

ಆದರೆ ಅಧಿಕಾರಿಗಳು ಭರವಸೆ ನೀಡಿ ಎರಡು ವರ್ಷ ಕಳೆದಿದ್ದು, ಇದುವರೆಗೂ ನಿವೇಶನ ನೀಡಿಲ್ಲ. ಈ ಬಗ್ಗೆ ವಿಚಾರಿಸಿದರೇ ಸುಳ್ಳು ಭರವಸೆ ನೀಡುತ್ತಾ ನಿವೇಶನ ರಹಿತರನ್ನು ವಂಚಿಸುತ್ತಿದ್ದಾರೆ. ಸದ್ಯ ನಿವೇಶನ ರಹಿತರು ಬಾಡಿಗೆ ಮನೆಗಳಲ್ಲಿ ಬದುಕುವಂತಾಗಿದ್ದು, ಕೆಲಸವೂ ಇಲ್ಲದೇ, ಬಾಡಿಗೆಯನ್ನೂ ಕಟ್ಟಲಾಗದೇ ಬಡ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಹೇಳಿಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಧರಣಿ ನಿರತರು ಅಳಲು ತೋಡಿಕೊಂಡರು.

ನಿವೇಶನವಿಲ್ಲದೇ ನಮಗೆ ಸ್ವಂತ ಮನೆಯ ಕನಸು ನನಸಾಗೇ ಉಳಿದಿದ್ದು, ಬಾಡಿಗೆ ಕಟ್ಟಲಾಗದ ಕುಟುಂಬಗಳು ಬೀದಿಪಾಲಾಗುತ್ತಿವೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡಲೇ ಬಡಾವಣೆಯ ನಿವೇಶನ ರಹಿತರಿಗೆ ಸೂಕ್ತ ನಿವೇಶನ ಒದಗಿಸಿ, ನಿವೇಶನಗಳಿಗೆ ಹಕ್ಕುಪತ್ರವನ್ನೂ ನೀಡಬೇಕು. ತಪ್ಪಿದಲ್ಲಿ ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿ ಧರಣಿ ಸ್ಥಳಕ್ಕೆ ಆಗಮಿಸಿ ನಿವೇಶನ ರಹಿತರಿಗೆ ಸೂಕ್ತ ಭರವಸೆ ನೀಡಬೇಕೆಂದು ಆಗ್ರಹಿಸಿದರು. ಮುಂದಿನ 15 ದಿನಗಳ ಒಳಗೆ ನಿವೇಶನ ಕಲ್ಪಿಸದಿದ್ದಲ್ಲಿ ಮತ್ತೆ ಪ್ರತಿಭಟನೆಗೆ ಮುಂದಾಗುವುದಾಗಿ ಇದೇ ವೇಳೆ ಧರಣಿ ನಿರತರು ಎಚ್ಚರಿಸಿದರು. ಬಳಿಕ ಪೌರಾಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಿದರು.

ಧರಣಿಯಲ್ಲಿ ಮುಹಮ್ಮದ್ ಅತೀಕ್, ಇಮ್ರಾನ್, ಚಾಂದ್ ಪಾಷ, ನವಾಝ್, ಮುಹಮ್ಮದ್ ಶರೀಫ್, ಶಾಭಾಝ್, ಮುನೀರ್ ಖಾನ್, ಕಮಲಮ್ಮ, ಹಸೀನಾ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News