ತಿಂಗಳೊಳಗೆ 1,246 ವೈದ್ಯರು, 824 ತಜ್ಞ ವೈದ್ಯರ ನೇಮಕಾತಿ: ಆರೋಗ್ಯ ಸಚಿವ ಡಾ.ಸುಧಾಕರ್
ಬೆಂಗಳೂರು, ಫೆ. 4: ರಾಜ್ಯದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಖಾಲಿ ಇರುವ 1,246 ಸಾಮಾನ್ಯ ವೈದ್ಯರು ಹಾಗೂ 824 ತಜ್ಞ ವೈದ್ಯರನ್ನು ತಿಂಗಳೊಳಗೆ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಆರ್.ನರೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳ ವರ್ಷಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ, ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ತೀವ್ರ ಸ್ವರೂಪದಲ್ಲಿದೆ. ಹೀಗಾಗಿ ಸಾಮಾನ್ಯ ವೈದ್ಯರು ಹಾಗೂ ತಜ್ಞ ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9,850 ಕಿರಿಯ ಆರೋಗ್ಯ ಸಹಾಯಕರ ಹುದ್ದೆಗಳು ಮಂಜೂರಾಗಿವೆ. ಆ ಪೈಕಿ ಖಾಲಿ ಇರುವ 224 ಹುದ್ದೆಗಳನ್ನು 2018ರ ಸಾಲಿನಲ್ಲಿ ವಿಶೇಷ ನೇಮಕಾತಿಯಡಿ ಭರ್ತಿ ಮಾಡಿಕೊಳ್ಳಲಾಗಿದೆ. ಒಟ್ಟು 7,123 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ 2,727 ಹುದ್ದೆಗಳು ಖಾಲಿ ಇವೆ ಎಂದರು.
ಇನ್ನು ಮೂರು ಅಥವಾ ನಾಲ್ಕು ತಿಂಗಳಲ್ಲಿ ನರ್ಸ್ ಗಳು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ನೇಮಕಾತಿಗೂ ಸರಕಾರ ಕ್ರಮ ವಹಿಸಲಿದೆ ಎಂದ ಅವರು, ರಾಜ್ಯದಲ್ಲಿ ತುರ್ತು ಅಗತ್ಯದ ಸಂದರ್ಭದಲ್ಲಿ ಆಂಬುಲೆನ್ಸ್ ಗಳಲ್ಲಿ 12 ಸೇವೆಗಳನ್ನು ಉತ್ಕೃಷ್ಟ , ಸಮರ್ಪಕವಾಗಿ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ 2 ಅಥವಾ 3 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಹನ್ನೆರಡು ವರ್ಷಗಳಿಂದ ಆಂಬುಲೆನ್ಸ್ ಸೇವೆಗಳನ್ನು ನೋಡಿ ನಾವು ಪಾಠ ಕಲಿತಿದ್ದೇವೆ. ಹೀಗಾಗಿ ಮುಂದಿನ ದಿನಗಳಲ್ಲಿ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಗುಣಮಟ್ಟದ ಸೇವೆ ನೀಡಲು ಉದ್ದೇಶಿಸಲಾಗಿದೆ ಎಂದ ಅವರು, ಪ್ರಸ್ತುತ ಒಂದು ಲಕ್ಷ ಜನಸಂಖ್ಯೆ ಒಂದರಂತೆ ಇರುವ ಆಂಬುಲೆನ್ಸ್ ಸೇವೆಯನ್ನು ಮುಂದಿನ ದಿನಗಳಲ್ಲಿ 30ರಿಂದ 35 ಸಾವಿರಕ್ಕೂ ಒಂದು ಆಂಬುಲೆನ್ಸ್ ಒದಗಿಸಲಾಗುವುದು ಎಂದರು.
ಆಸ್ಪತ್ರೆ ನಿರ್ಮಾಣ: ಮಲೆಮಹೇಶ್ವರ ಬೆಟ್ಟದಲ್ಲಿ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮ್ಮತಿ ಸೂಚಿಸಿದ್ದು, ಈ ವರ್ಷದ ಅಂತ್ಯದೊಳಗೆ ಹೊಸ ಆಸ್ಪತ್ರೆ ನಿರ್ಮಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸುಧಾಕರ್ ವಿವರಿಸಿದರು.
ಮೇಲ್ದರ್ಜೆಗೆ: ಹೊಸದಾಗಿ ರಚನೆಯಾಗಿರುವ 49 ತಾಲೂಕುಗಳಲ್ಲಿ ಹೊಸ ಕಟ್ಟಡಗಳ ಮೂಲಕ ನಾವು ಆರೋಗ್ಯ ಕೇಂದ್ರಗಳನ್ನು ನಿರ್ಮಿಸಬೇಕು. ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಸಿಎಂ ಆರೋಗ್ಯ-ಶಿಕ್ಷಣಕ್ಕೆ ವಿಶೇಷ ಒತ್ತು ಕೊಡಬೇಕೆಂದು ಸೂಚಿಸಿದ್ದಾರೆ. ಹೊಸ ತಾಲೂಕುಗಳಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು.