‘ಖಡಕ್ ಇಟ್ಟುಕೊಂಡು ಏನು ಮಾಡಲಿ, ಈಗ ಹಿಂದಕ್ಕೆ ಬಂದಿಲ್ಲವೇ': ಖಾತೆ ಬದಲಾವಣೆಗೆ ಜೆ.ಸಿ.ಮಾಧುಸ್ವಾಮಿ ಬೇಸರ

Update: 2021-02-04 12:41 GMT

ಬೆಂಗಳೂರು, ಫೆ. 4: ‘ಖಡಕ್ ಇಟ್ಟುಕೊಂಡು ಏನ್ಮಾಡೋಣ.. ನಾನು ಈಗ ಹಿಂದಕ್ಕೆ ಬಂದು ಹಿಂದಿನ ಸಾಲಿನಲ್ಲಿ ಕೂತಿಲ್ವಾ..' ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಮ್ಮ ಖಾತೆ ಬದಲಾವಣೆ ಸಂಬಂಧ ಬೇಸರವನ್ನು ಸದನದಲ್ಲಿ ಹೊರಹಾಕುವ ಮೂಲಕ ಸರಕಾರಕ್ಕೆ ಮುಜುಗರ ಸೃಷ್ಟಿಸಿದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.

ಗುರುವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಶಿವಾನಂದ್ ಎಸ್.ಪಾಟೀಲ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬದಲಿಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರಿಗೆ ಸ್ಪೀಕರ್ ಕಾಗೇರಿ ಅವರು ಸೂಚಿಸಿದ್ದು ಅಸಮಾಧಾನಕ್ಕೆ ಕಾರಣವಾಯಿತು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಿವಾನಂದ ಪಾಟೀಲ್, ‘ಮುಳವಾಡ ಮುಖ್ಯ ಕಾಲುವೆಯನ್ನು ಅಲ್ಲಿನ ಅಧಿಕಾರಿ ಅನಧಿಕೃತವಾಗಿ ಹೊಡೆದು ಬೇರೆಯವರಿಗೆ ನೀರು ಕೊಟ್ಟಿದ್ದಾರೆ. ಇದು ಕಾನೂನಿಗೆ ವಿರುದ್ಧ. ಈ ಸಂಬಂಧ ಫೋಟೋ ಸಮೇತ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದು ವರ್ಷ ಕಳೆದರೂ ನನಗೆ ಉತ್ತರ ಬಂದಿಲ್ಲ. ಅಧಿಕಾರಿಯ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರ ನೀಡಬೇಕೆಂದು ನಿರೀಕ್ಷಿಸಿದ ಸ್ಪೀಕರ್ ಗೆ ಸಚಿವ ಮಾಧುಸ್ವಾಮಿ, ‘ಸಭಾಧ್ಯಕ್ಷರೇ ಈ ಮುಖ್ಯ ಕಾಲುವೆ ನನ್ನ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಆದರೂ ನನಗೆ ನೋಟಿಸ್ ನೀಡಿ ಉತ್ತರ ಕೊಡಿ ಎಂದು ಹೇಳಿದ್ದೀರಿ, ಇದು ಸರಿಯಲ್ಲ' ಎಂದು ಪ್ರತಿಕ್ರಿಯೆ ನಿರಾಕರಿಸಿದರು.

ಈ ವೇಳೆ ಎದ್ದುನಿಂತ ಶಿವಾನಂದ ಪಾಟೀಲ್, ‘ಮಾಧುಸ್ವಾಮಿಯವರೇ ನೀವು ಉತ್ತರ ಕೊಡಿ. ನೀವು ಕೊಟ್ಟರೆ ಉತ್ತರ ಖಡಕ್ ಆಗಿರುತ್ತದೆ ಎಂದು ಕಿಚಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಖಡಕ್ ಇಟ್ಟುಕೊಂಡು ಏನ್ಮಾಡ್ಲಿ, ಹಿಂದಕ್ಕೆ ಬಂದು ಕೂತಿಲ್ವಾ..' ಬೇಸರ ವ್ಯಕ್ತಪಡಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವರಾಗಿದ್ದ ಜೆ.ಸಿ.ಮಾಧುಸ್ವಾಮಿ ಅವರ ಖಾತೆಯನ್ನು ಹಿಂಪಡೆದ ಹಿನ್ನೆಲೆಯಲ್ಲಿ ಕಲಾಪದಲ್ಲಿ ತಮ್ಮ ಇಲಾಖೆಯನ್ನು ಹೊರತುಪಡಿಸಿ ಇತರೆ ಯಾವುದೇ ವಿಚಾರಗಳಿಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಸರಕಾರದ ನೆರವಿಗೂ ಯಾವುದೇ ಸಂದರ್ಭದಲ್ಲಿಯೂ ಮಾಧುಸ್ವಾಮಿ ಧಾವಿಸದೆ ಮೌನಕ್ಕೆ ಶರಣಾಗಿರುವುದು ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News