×
Ad

ಸಮ್ಮಿಶ್ರ ಸರಕಾರ ಮಂಜೂರು ಮಾಡಿದ್ದ ಕಾಮಗಾರಿಗಳಿಗೆ ತಡೆ: ಪರಿಷತ್‍ನಲ್ಲಿ ಗದ್ದಲ, ಕೋಲಾಹಲ

Update: 2021-02-04 18:50 IST

ಬೆಂಗಳೂರು, ಫೆ.4: ಕಳೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಮಂಡ್ಯ ಜಿಲ್ಲೆಗೆ ಮಂಜೂರು ಮಾಡಿದ್ದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ಜೆಡಿಎಸ್‍ನ ಮರಿತಿಬ್ಬೇಗೌಡ ಆರೋಪಿಸಿದ್ದು, ಇದರಿಂದ ವಿಧಾನ ಪರಿಷತ್‍ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು, ಮಂಡ್ಯ ಜಿಲ್ಲೆಯಲ್ಲಿ ಜಲಸಂಪನ್ಮೂಲ ಇಲಾಖೆಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಯ ವಿವರ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವ ಬಸವರಾಜ ಬೊಮ್ಮಾಯಿ ಅವರು, ಮದ್ದೂರು ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವ 67 ಲಕ್ಷ ರೂ.ಮೊತ್ತದ ಮೂರು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.

ಆಗ ಮಾತನಾಡಿದ ಮರಿತಿಬ್ಬೇಗೌಡ ಅವರು, ದುಡ್ಡು ಕೊಟ್ಟರೆಂದು ಮೂರು ಕಾಮಗಾರಿ ಕೊಟ್ಟಿದ್ದೀರಾ ಎಂದು ಆರೋಪಿಸಿದರು. ಈ ಆರೋಪಕ್ಕೆ ಬಿಜೆಪಿ ಸದಸ್ಯರು ತೀವ್ರ ವ್ಯಕ್ತಪಡಿಸಿ, ಮರಿತಿಬ್ಬೇಗೌಡ ಅವರನ್ನು ಅಮಾನತುಗೊಳಿಸಬೇಕೆಂದು ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಅವರಲ್ಲಿ ಮನವಿ ಮಾಡಿದರು.

ಮತ್ತೆ ಮಾತು ಮುಂದುವರೆಸಿದ ಮರಿತಿಬ್ಬೇಗೌಡ ಅವರು, ಮಂಡ್ಯ ಜಿಲ್ಲೆಯ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಂಡಾಮಂಡಲವಾಗಿ ಕಾಗದ ಪತ್ರಗಳನ್ನು ಎಸೆದರು. ಆಗ ಸಚಿವ ಬೊಮ್ಮಾಯಿ ಅವರು ನೀವು ನಮ್ಮನ್ನು ಹೆದರಿಸುತ್ತೀರಾ, ಆ ಕಾಲ ಹೋಗಿದೆ. ನೀವು ಬಹುದೊಡ್ಡ ಡೋಂಗಿಗಳು ಅಂತ ನಮಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಬಿಜೆಪಿ ಸದಸ್ಯರು ಮರಿತಿಬ್ಬೇಗೌಡ ಅವರು ಪ್ರತಿದಿನ ಹೀಗೆಯೇ ಮಾಡುತ್ತಾರೆ. ಅವರು ಹೊಸಬರಲ್ಲ. ಕ್ಷಮೆ ಬೇಡ. ಅಮಾನತು ಮಾಡಿ ಎಂದು ಆಗ್ರಹಿಸಿದರು. ಬಿಜೆಪಿಯ ನಾರಾಯಣಸ್ವಾಮಿ, ತೇಜಸ್ವಿಗೌಡ ಸೇರಿ ಬಹುತೇಕರು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದರು. ಆಗ ಸಚಿವ ಮಾಧುಸ್ವಾಮಿ ಅವರು, ಈಗಲೇ ಮರಿತಿಬ್ಬೇಗೌಡ ಅವರನ್ನು ಅಮಾನತು ಮಾಡಬೇಕು ಎಂದು ಹಠ ಹಿಡಿದರು. ಆಯನೂರು ಮಂಜುನಾಥ್ ಎತ್ತಿರುವ ಕ್ರಿಯಾಲೋಪಕ್ಕೆ ನಾನು ಕೆಲ ಮಾತುಗಳನ್ನು ಹೇಳಬೇಕಿದೆ ಎಂದು ಮರಿತಿಬ್ಬೇಗೌಡ ತಿಳಿಸಿದಾಗ ಗದ್ದಲ, ಗಲಾಟೆ ಜೋರಾಯಿತು. ಜೆಡಿಎಸ್ ಸದಸ್ಯರು ಮರಿತಿಬ್ಬೇಗೌಡ ಅವರನ್ನು ಸಮಾಧಾನಪಡಿಸಿಲು ಪ್ರಯತ್ನಿಸಿದರೆ, ಕಾಂಗ್ರೆಸ್ ಸದಸ್ಯರು ಮರಿತಿಬ್ಬೇಗೌಡರಿಗೆ ಬೆಂಬಲ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News