ಪ್ರೊ.ಭಗವಾನ್ ಮುಖಕ್ಕೆ ಮಸಿ: ಸಾಹಿತಿಗಳು, ಸಾಮಾಜಿಕ ಹೋರಾಟಗಾರರ ಖಂಡನೆ, ಕ್ರಮಕ್ಕೆ ಪಟ್ಟು

Update: 2021-02-06 05:07 GMT

ಬೆಂಗಳೂರು, ಫೆ.4: ಸಾಹಿತಿ, ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರನ್ನು ಗುರಿಯಾಗಿಸಿಕೊಂಡು ವಕೀಲೆ ಮೀರಾ ರಾಘವೇಂದ್ರ ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದು, ನಿಂದಿಸಿರುವ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ರೀತಿಯ ಕ್ರಮ ಜರುಗಿಸುವಂತೆ ಹಲವರು ಒತ್ತಾಯಿಸಿದ್ದಾರೆ.

ಇದರ ನಡುವೆ ಸ್ವತಃ ಭಗವಾನ್ ಅವರು ಇಲ್ಲಿನ ಹಲಸೂರುಗೇಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಇದರನ್ವಯ ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯವುದು), 504(ಅವಾಚ್ಯವಾಗಿ ನಿಂದನೆ), 506(ಕೊಲೆ ಬೆದರಿಕೆ) ಅಡಿ ಎಫ್‍ಐಆರ್ ದಾಖಲಾಗಿದೆ.

ಜತೆಗೆ, ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‍ಗೂ ದೂರು ಸಲ್ಲಿರುವ ಭಗವಾನ್ ಅವರು, ಪೂರ್ವಯೋಜಿತ ಕೃತ್ಯವೆಸಗಿರುವ ವಕೀಲೆ ಮೀರಾ ರಾಘವೇಂದ್ರ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದ್ದಾರೆ.

ಮುಖಕ್ಕೆ ಮಸಿ: ಪ್ರಕರಣವೊಂದರ ವಿಚಾರಣೆಗಾಗಿ ಗುರುವಾರ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಬಂದಿದ್ದ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರನ್ನು ಗುರಿಯಾಗಿಸಿಕೊಂಡು ವಕೀಲೆ ಮೀರಾ ರಾಘವೇಂದ್ರ ನ್ಯಾಯಾಲಯದ ಆವರಣದಲ್ಲಿಯೇ ಭಗವಾನ್ ಅವರ ಮುಖಕ್ಕೆ ಮಸಿ ಎರಚಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಭಗವಾನ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು, ಈ ಕುರಿತು ವಿಡಿಯೊ ಹಂಚಿಕೊಂಡಿರುವ ವಕೀಲೆ ಮೀರಾ ರಾಘವೇಂದ್ರ, ಇಷ್ಟು ವಯಸ್ಸಾಗಿದೆ. ಸದಾ ದೇವರ ಬಗ್ಗೆ ರಾಮನ ಬಗ್ಗೆ ಮಾತಾಡ್ತಿರಾ. ನಾಚಿಕೆ ಆಗಲ್ವಾ ನಿಮಗೆ? ಎಂದು ಕೂಗಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧ, ಜೈಲಿಗೆ ಹೋಗಲೂ ಸಿದ್ಧ ಎಂದಿದ್ದಾರೆ.

ಬಳಿಕ ಈ ಘಟನೆ ನಡೆಯುತ್ತಿದ್ದಂತೆ ಭಗವಾನ್ ಹಾಗೂ ಅವರ ಅಂಗರಕ್ಷಕನನ್ನು ಪೊಲೀಸರು ನ್ಯಾಯಾಲಯದ ಆವರಣದಿಂದ ಕರೆದೊಯ್ದರು.

ಸಚಿವರು ಸೇರಿ ಹಲವರ ಖಂಡನೆ

ಸಾಹಿತಿ ಕೆ.ಎಸ್.ಭಗವಾನ್ ಅವರ ಮೇಲೆ ವಕೀಲೆ ರಾಘವೇಂದ್ರ ಮಸಿ ಬಳಿದಿರುವ ಕೃತ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಸಾಹಿತಿಗಳು, ಬರಹಗಾರರು, ವಕೀಲರು, ಸಾಮಾಜಿಕ ಹೋರಾಟಗಾರರು ಖಂಡಿಸಿದ್ದಾರೆ.

ಹಿರಿಯ ಸಾಹಿತಿ ಮೇಲೆ ಈ ರೀತಿಯ ಕೃತ್ಯ ನಡೆಸಿರುವುದು ದುರದೃಷ್ಟಕರ. ತಾತ್ವಿಕ ಭಿನ್ನಾಭಿಪ್ರಾಯಾಗಳು ದೈಹಿಕ ಹಲ್ಲೆ, ದೈಹಿಕ ಹಿಂಸೆ ರೂಪ ತಾಳಬಾರದು. ಇಂತಹ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಮಸಿ ಬಳಿಯುವುದು ಕನ್ನಡದ ಸಂಸ್ಕೃತಿಯೂ ಅಲ್ಲ ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ವಕೀಲರ ವೇದಿಕೆ ಅಧ್ಯಕ್ಷೆ ಸುಮತಿ, ನಾವು ಸಂವಿಧಾನ ಮತ್ತು ಕಾನೂನು ಮೇಲೆ ನಂಬಿಕೆ ಇಡಬೇಕು. ವಾದ ಏನೇ ಇರಲಿ, ಘಟನೆ ಹೇಗೆ ನಡೆದಿರಲಿ. ಅದನ್ನು ಕಾನೂನು ಮೂಲಕವೇ ಜಯಗಳಿಸಬೇಕು. ಆದರೆ, ಮೀರಾ ರಾಘವೇಂದ್ರ ಅವರ ಈ ರೀತಿಯ ಕೃತ್ಯ ಸರಿಯಲ್ಲ, ಇದು ಖಂಡನೀಯ ಎಂದರು.

ಲೇಖಕ ಡಾ.ವಡ್ಡಗೆರೆ ನಾಗರಾಜಯ್ಯ, ಮೀರಾ ಮಸಿ ಬಳಿದದ್ದು ವಕೀಲರ ವೃತ್ತಿ ಸಂಹಿತೆಗೆ ಅಪಚಾರ. ನ್ಯಾಯಾಲಯದ ಅಂಗಳದಲ್ಲಿ ಸಮವಸ್ತ್ರ ಧರಿಸಿರುವುದನ್ನೆ ಮರೆತು ಪ್ರೊ.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ವಕೀಲರ ವೃತ್ತಿಯ ವಿರುದ್ಧವೆಸಗಿರುವ ಅನಾಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಹೋರಾಟಗಾರ ಅನಂತ್ ನಾಯ್ಕ್ ಪ್ರತಿಕ್ರಿಯಿಸಿ, ಮೀರಾ ರಾಘವೇಂದ್ರ ಅವರ ಕೃತ್ಯ ಖಂಡನೀಯ. ಅವರು ಈ ರೀತಿಯಲ್ಲಿ ಮಾಡಿರುವ ಘಟನೆಯು ನ್ಯಾಯಾಲಯಕ್ಕೆ ಮಸಿ ಬಳೆಯುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ನ್ಯಾಯವಾದಿ ಸೂರ್ಯ ಮುಕುಂದರಾಜ್, ನ್ಯಾಯಾಲಯದ ಆವರಣದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ಭಗವಾನ್ ಅವರು ಕಾನೂನಿಗೆ ಬೆಲೆ ಕೊಟ್ಟು ಮೈಸೂರಿಂದ ಬೆಂಗಳೂರಿಗೆ ಬಂದು ಕೋರ್ಟಿಗೆ ಹಾಜರಾಗಿದ್ದಾರೆ. ಕರಿಕೋಟ್ ಹಾಕಿರುವ ವಕೀಲೆ ಈ ರೀತಿ ಮಾಡುವುದು ಸರಿಯಲ್ಲ. ನ್ಯಾಯ ಕೊಡಿಸುವ ವಕೀಲರು ಈ ರೀತಿ ಸಮಾಜಕ್ಕೆ ಕೆಟ್ಟ ಸಂದೇಶ ಕೊಡಬಾರದು ಎಂದರು.

ಇದು ನ್ಯಾಯಲಯ ಮತ್ತು ವಕೀಲ ಸಮುದಾಯಕ್ಕೆ ಮಾಡಿದ ಅಪಮಾನ ಎಂದ ಅವರು, ಅವರು ಪ್ರತಿಭಟನೆ ಮಾಡುವುದಿದ್ದರೆ, ಹೊರಗಡೆ ಮಾಡಲಿ. ಈ ಕೃತ್ಯ ಎಸಗಿದ ವಕೀಲೆಗೆ ನ್ಯಾಯಾಲಯದಿಂದ ನಿರ್ಬಂಧ ಹೇರಬೇಕು. ಹಲ್ಲೆ ಅವಾಚ್ಯ ಶಬ್ದದಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಂಗರಕ್ಷಕ ಇರಬೇಕಾದರೆ ಹಲ್ಲೆ ಮಾಡಿದ್ದಾರೆಂದರೆ ಇಲ್ಲದಿದ್ದಾಗ ಕೊಲೆ ಮಾಡಲು ಹೆದರುವುದಿಲ್ಲ. ಈ ಸಂಬಂಧ ವಕೀಲರ ಸಂಘಕ್ಕೆ ದೂರು ನೀಡಲಾಗುವುದು. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡುವೆ ಎಂದು ತಿಳಿಸಿದರು.

ಜಾಮೀನು ಸಿಕ್ಕಿದಕ್ಕೆ ಆಕ್ರೋಶ ?

ಧರ್ಮ ಅವಹೇಳನ ಆರೋಪ ಸಂಬಂಧ ಸಾಹಿತಿ ಪ್ರೋ.ಭಗವಾನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 298 ಮತ್ತು 505ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ಸ್ವತಃ ವಕೀಲೆ ಮೀರಾ ರಾಘವೇಂದ್ರ, ವಾದ ಮಂಡಿಸಿದ್ದರು. ಆದರೆ, ಪ್ರತಿವಾದ ನಡೆಸಿದ ಬಳಿಕ ಕಕ್ಷಿದಾರನಿಗೆ(ಭಗವಾನ್ ಅವರಿಗೆ) ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದಕ್ಕೆ, ಆಕ್ರೋಶಗೊಂಡು ಈ ರೀತಿಯ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News