×
Ad

ಮೈಸೂರು: ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಚಿಂತಕರ ಪ್ರತಿಭಟನೆ

Update: 2021-02-04 22:12 IST

ಮೈಸೂರು: ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ಘಟನೆ ಖಂಡಿಸಿ ಮೈಸೂರಿನಲ್ಲಿ ಪ್ರಗತಿಪರ ಚಿಂತಕರು ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ವಕೀಲೆ ಮೀರಾ ರಾಘವೇಂದ್ರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸಾಹಿತಿ ಫ್ರೊ.ಅರವಿಂದ ಮಾಲಗತ್ತಿ, ವಕೀಲೆ ಮೀರಾ ರಾಘವೇಂದ್ರ ಭಗವಾನ್ ಮುಖಕ್ಕೆ ಮಸಿ ಬಳಿದಿಲ್ಲ, ಅವರು ಮಸಿ ಬಳಿದಿರುವುದು ನ್ಯಾಯಾಂಗಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಗವಾನ್ ವಿರುದ್ಧ ಪ್ರಕರಣ ದಾಖಲು ಮಾಡಿ ಅವರು ಜಾಮೀನು ಪಡೆದು ಹೊರಬರುವ ವೇಳೆ ಇಂತಹ ಕೃತ್ಯ ಎಸಗಿರುವುದು ಅತ್ಯಂತ ಖಂಡನೀಯ. ಭಗವಾನ್ ಎಂದು ಹೆಸರಿಟ್ಟುಕೊಂಡು ಇವರು ಹಿಂದೂಗಳುಗೆ ಅವಮಾನ ಮಾಡಿದ್ದಾರೆ ಎಂದು ಮೀರ ರಾಘವೇಂದ್ರ ಹೇಳದ್ದಾರೆ. ಆದರೆ ಇವರು ಮೀರ ಎಂದು ಹೆಸರಿಟ್ಟುಕೊಂಡು ಇಂತಹ ಅವಿವೇಕದ ಕೆಲಸ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಮಾತನಾಡಿ, ಭಗವಾನ್ ಅಂತಹ ಸಾಹಿತಿಗೆ ನ್ಯಾಯಾಲಯದ ಆವರದಲ್ಲಿ ಮಸಿ ಬಳಿದಿರುವುದು ದುರದೃಷ್ಟಕರ. ಮಸಿ ಬಳಿಯುಚ ವೇಳೆ ಮೀರಾ ರಾಘವೇಂದ್ರ ಪತಿ ವೀಡಿಯೋ ಮಾಡುತ್ತಿದ್ದರು ಎಂದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ. ಮೀರಾ ಅವರು ಭಗವಾನ್ ಮುಖಕ್ಕೆ ಮಸಿ ಬಳಿದಿರಬಹುದು, ಅದನ್ನು ನೀರು ಹಾಕಿ ತೊಳೆದರೆ ಹೊರಟುಹೋಗುತ್ತದೆ. ಆದರೆ ಮೀರಾ ಅವರು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡಿದ್ದಾರೆ. ಅವರು ಬದುಕಿರುವವರೆಗೂ ಈ ಕಳಂಕ ಅಂಟಿಕೊಂಡಿರುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾವು ಹಿಂದೂ ವಿರೋಧಿಗಳಲ್ಲ, ಮನುವಾದಿ ಮತ್ತು ಹಿಂದೂತ್ವದ ವಿರೋಧಿಗಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಅಭಿಪ್ರಾಯ ಮಂಡಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಅದನ್ನು ವಿರೋಧಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ‌.ಎಸ್.ಶಿವರಾಂ ಮಾತನಾಡಿ, ವೈಚಾರಿಕ, ಮಾನವೀಯ ಮತ್ತು ಸಂವಿಧಾನ ಮೌಲ್ಯಗಳಿಗೆ ಬದ್ಧರಾಗಿರುವ ವಿಚಾರವಾದಿ ಪ್ರೊ‌ಕೆ‌.ಎಸ್.ಭಗವಾನ್ ಅವರು ನ್ಯಾಯಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೀರಾ ರಾಘವೇಂದ್ರ ಎಂಬುವವರು ಅವರ ಮುಖಕ್ಕೆ ಮಸಿ ಬಳಿದಿರುವುದು ಹಾಗೂ ಅವಿವೇಕದಿಂದ ವರ್ತಿಸಿರುವುದು ತೀವ್ರ ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಆರ್‌.ಕೆ.ರವಿ, ಮಹೇಂದ್ರ.ಎಂ.ಕಾಗಿನೆಲೆ, ಸುನಿಲ್ ನಾರಾಯಣ್, ಪವನ್, ಸಿದ್ದರಾಮ, ಜೆ.ರವಿನಾಯಕ್, ಶರತ್, ರವಿ, ಸೋಮಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News