ಸರಕಾರಿ ನೌಕರರ ಸಂಘದ ಉಪಾಧ್ಯಕ್ಷನ ಹೆಸರಿನಲ್ಲಿ 70 ಲಕ್ಷ ರೂ. ವಂಚನೆ

Update: 2021-02-04 17:06 GMT

ಬೆಂಗಳೂರು, ಫೆ.4: ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂದು ಹೇಳಿಕೊಂಡು ಪರಿಚಯವಿರುವ ಸಚಿವರಿಂದ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ, ರಾಜೀವ್‍ಗಾಂಧಿ ಆರೋಗ್ಯ ವಿವಿಯ ಸಹಾಯಕ ವ್ಯವಸ್ಥಾಪಕಿಯಿಂದ 70 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಸಹಾಯಕ ಅಸಿಸ್ಟೆಂಟ್ ವ್ಯವಸ್ಥಾಪಕಿ ಡಾ.ಪ್ರಭಾ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿ ಮಂಜುನಾಥ್, ಆತನ ಪತ್ನಿ ಲಕ್ಷ್ಮೀ ಪ್ರಿಯಾ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ಬಾಳದಲ್ಲಿರುವ ಪಶುಪಾಲನಾ ಇಲಾಖೆಯಲ್ಲಿ ಎಫ್‍ಡಿಎ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಪ್ರಭಾ ಅವರಿಗೆ ದೂರದ ಸಂಬಂಧಿ ಎನ್ನಲಾಗಿದ್ದು, ಪ್ರಭಾ ಅವರು ಕೋಲಾರದಲ್ಲಿರುವ ತಂದೆ ಮನೆಗೆ ಹೋಗಿದ್ದಾಗ ಮಂಜುನಾಥ್ ಭೇಟಿಯಾಗಿದ್ದಾನೆ.

ಈ ವೇಳೆ, ನಾನು ರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿದ್ದೇನೆ. ನನಗೆ ಎಲ್ಲ ಸಚಿವರ ಪರಿಚಯವಿದ್ದು, ನಿಮ್ಮ ಕೆಲಸಗಳೇನಾದರೂ ಇದ್ದರೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ ಎಂದು ಹೇಳಲಾಗುತ್ತಿದೆ.

2019ರಲ್ಲಿ ಪ್ರಭಾ ಅವರನ್ನು ಹೆಬ್ಬಾಳ ಖಾಸಗಿ ಹೋಟೆಲ್‍ಗೆ ಮಾತುಕತೆಗೆ ಕರೆದ ಆರೋಪಿ ಸಂಘದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಒಂದು ಲಕ್ಷ ಹಣ ನೀಡುವಂತೆ ಮನವಿ ಮಾಡಿಕೊಂಡಿದ್ದ. ಅದರಂತೆ ಪ್ರಭಾ ಹಣ ನೀಡಿದ್ದರು. ಕೆಲದಿನಗಳ ಬಳಿಕ ಆರೋಪಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಹಣ ಇಲ್ಲ ಎಂದು ಹೇಳಿದಕ್ಕೆ ಬಜಾಜ್ ಫೈನಾನ್ಸ್ ನಿಂದ ಸಾಲ ಮಂಜೂರು ಮಾಡಿಸಿ ಕೊಟ್ಟು ಹಣ ಪಡೆದಿದ್ದ. ಹೀಗೆ, ಹಂತ-ಹಂತವಾಗಿ 70.35 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News