ಅನರ್ಹರಿಗೆ ಮನೆಗಳ ಹಂಚಿಕೆ ಆರೋಪ: ಸಚಿವ ಸೋಮಣ್ಣ- ಶಾಸಕ ಈಶ್ವರ್ ಖಂಡ್ರೆ ನಡುವೆ ವಾಕ್ಸಮರ

Update: 2021-02-04 17:26 GMT

ಬೆಂಗಳೂರು, ಫೆ.4: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಶೇ.40ರಷ್ಟು ಮಂದಿ ಅನರ್ಹರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಬದಲಾಗಿ ಸ್ಥಳೀಯ ಶಾಸಕರು ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ನೀಡಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ನೀಡಿದ ಹೇಳಿಕೆಯು ಕೆಲಕಾಲ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಹಾಗೂ ಅವರ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತ್ತು.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಈಶ್ವರ್ ಖಂಡ್ರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ನಮ್ಮ ಭಾಗದ ಅಭಿವೃದ್ಧಿ ಕುಂಠಿತವಾಗಿದೆ. ಬಡವರಿಗೆ ಮಂಜೂರಾಗಿರುವ ಮನೆಗಳು ಕಟ್ಟಿಸಿಕೊಳ್ಳಲು ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಸತಿ ಸಚಿವ ಸೋಮಣ್ಣ, ಭಾಲ್ಕಿ ತಾಲೂಕಿನಲ್ಲಿ 17 ಸಾವಿರ ಮನೆಗಳು ಮಂಜೂರಾಗಿವೆ. ಈ ಪೈಕಿ ಶೇ.40ರಷ್ಟು ಬೋಗಸ್ ಮನೆಗಳು. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕರೇ ಮನೆಗಳ ನಿರ್ಮಾಣಕ್ಕೆ ಆದೇಶ ಪತ್ರ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, 6 ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದರು.

ಜಿಪಿಎಸ್ ಹಾಕಿ ಗ್ರಾಮೀಣ ಪ್ರದೇಶದಲ್ಲಿ 6 ಲಕ್ಷ ಹಾಗೂ ಪಟ್ಟಣ, ನಗರ ಪ್ರದೇಶಗಳಲ್ಲಿ 4 ಲಕ್ಷ ಮನೆಗಳನ್ನು ನಿರ್ಮಿಸಲು ನಮ್ಮ ಸರಕಾರ ನಿರ್ಧರಿಸಿದೆ. ಇದಕ್ಕಾಗಿ 10 ಸಾವಿರ ಕೋಟಿ ರೂ.ಕಾಯ್ದಿರಿಸಿದ್ದೇವೆ. ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಎಷ್ಟು ಮನೆಗಳು ಬೇಕು, ಸರಕಾರಿ ಜಾಗದ ಲಭ್ಯತೆ ಎಷ್ಟಿದೆ ಎಂಬ ಮಾಹಿತಿಯನ್ನು ನೀಡುವಂತೆ ಶಾಸಕರಿಗೆ ಪತ್ರ ಬರೆದು ಮಾಹಿತಿ ಕೋರಿದ್ದೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಈಶ್ವರ್ ಖಂಡ್ರೆ, ವಸತಿ ಸಚಿವರು ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಸಚಿವರು ನನ್ನ ಕ್ಷೇತ್ರಕ್ಕೆ ಭೇಟಿ ಕೊಟ್ಟು, ನನ್ನ ರಾಜಕೀಯ ವಿರೋಧಿಗಳಿಂದ ದೂರು ಪಡೆದು ವೈಯಕ್ತಿಕ ದುರುದ್ದೇಶದಿಂದ ಈ ಆರೋಪವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಭಾಲ್ಕಿ ತಾಲೂಕಿಗೆ 17 ಸಾವಿರ ಮನೆಗಳು ಮಂಜೂರಾಗಿತ್ತು. ತನಿಖೆಯ ನೆಪದಲ್ಲಿ ಯಾವುದೇ ಮನೆಗಳಿಗೆ ದುಡ್ಡು ಕೊಡಬಾರದು ಎಂದು ತಡೆ ಹಿಡಿಯಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಒಬ್ಬ ಭ್ರಷ್ಟ ಅಧಿಕಾರಿ ಮಹದೇವಪ್ರಸಾದ್‍ರನ್ನು ಇಟ್ಟುಕೊಂಡಿದ್ದಾರೆ. ಆತ ಹೊರಗುತ್ತಿಗೆಯಲ್ಲಿ ಇರುವವರಿಂದ ತನಿಖೆ ಮಾಡಿಸಿ, ಕನಿಷ್ಠ ವಿಸ್ತರಣೆಗಿಂತ ಕಡಿಮೆ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರಿಂದ ಸರಕಾರದಿಂದ ಮಂಜೂರಾಗಿರುವ 1.50 ಲಕ್ಷ ರೂ.ವಾಪಸ್ ನೀಡುವಂತೆ ಸೂಚಿಸಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ಕಿಡಿಗಾರಿದರು.

ಅಲ್ಲದೆ, ನಾನು ಮನೆಗಳ ನಿರ್ಮಾಣಕ್ಕೆ ಆದೇಶ ಪತ್ರ ನೀಡಿಲ್ಲ. ಫಲಾನುಭವಿಗಳಿಗೆ ಮಧ್ಯವರ್ತಿಗಳಿಗೆ ಹಣ ನೀಡಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಬೇಡಿ ಎಂಬ ಮಾಹಿತಿಯನ್ನು ಒಳಗೊಂಡ ಪತ್ರವನ್ನು ನೀಡಿದ್ದೇನೆ. ಅದು ಅಪರಾಧವೇ? ನಾನು ಅಕ್ರಮ ಮಾಡಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಸಿಬಿಐ, ಸಿಐಡಿ ತನಿಖೆಗೆ ನಾನು ಸಿದ್ಧ ಎಂದು ಅವರು ಸವಾಲು ಹಾಕಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಸತಿ ಸಚಿವ ಸೋಮಣ್ಣ, ಸಿದ್ದರಾಮಯ್ಯ ಸರಕಾರದಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲು ಆದೇಶ ಮಾಡಿ 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಕಂದಾಯ ಇಲಾಖೆ, ಬಿಬಿಎಂಪಿ ಸುತಮುತ್ತಲು 15 ರಿಂದ 20 ಎಕರೆ ಜಾಗ ಬಿಟ್ಟು ಬೇರೆ ಏನು ಸಿಕ್ಕಿಲ್ಲ. ಜಿ ಪ್ಲಸ್ 3 ಮಾದರಿಯ ಮನೆಗಳ ನಿರ್ಮಾಣಕ್ಕೆ ಟೆಂಡರ್ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆನಂತರ ಅದು ಜಿ ಪ್ಲಸ್ 14 ಆಯಿತು ಎಂದರು.

ನೇಣು ಹಾಕಿಕೊಳ್ಳುತ್ತೇನೆ: ನನ್ನ ಅಧಿಕಾರಾವಧಿಯಲ್ಲಿ ಒಂದೇ ಒಂದು ಅಪಚಾರ ಮಾಡಿಲ್ಲ. ಬಡವರಿಗೆ ಮನೆಗಳನ್ನು ನಿರ್ಮಿಸಲು 307 ಎಕರೆ ಜಾಗವನ್ನು ಗುರುತಿಸಿದ್ದೇವೆ. ಬೆಂಗಳೂರಿನಲ್ಲಿ 48 ಸಾವಿರ ಮನೆಗಳ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಒಂದು ವೇಳೆ ಮನೆಗಳ ಮಂಜೂರಾತಿಗೆ ನಾನೇನಾದರೂ ಅಕ್ರಮ ಮಾಡಿರುವುದನ್ನು ಸಾಬೀತು ಪಡಿಸಿದರೆ ವಿಧಾನಸೌಧದ ಎದುರು ನೇಣು ಹಾಕಿಕೊಳ್ಳುತ್ತೇನೆ ಎಂದು ಸೋಮಣ್ಣ ಹೇಳಿದರು.

ಒಂದು ಸದನ ಸಮಿತಿ ರಚನೆ ಮಾಡಿ ಭಾಲ್ಕಿ ತಾಲೂಕಿಗೆ ಕಳುಹಿಸಿ ಶೇ.35 ರಿಂದ 40ರಷ್ಟು ಅಕ್ರಮ ಆಗಿದ್ದರೆ ಅದನ್ನು ಸರಿಪಡಿಸಲಿ, ನಾನು ತಪ್ಪು ಮಾಡಿದ್ದರೆ ರಾಜೀನಾಮೆ ನೀಡುತ್ತೇನೆ. ನಾನು ಯಾರಿಗೂ ದೋಚಿದವನಲ್ಲ, ಟೋಪಿ ಹಾಕಿದವನಲ್ಲ. ಒಂದು ಸುಸಂಸ್ಕೃತ ಹಿನ್ನೆಲೆಯಿಂದ ಬಂದವನು ನಾನು ಎಂದು ಸೋಮಣ್ಣ ಹೇಳಿದರು.

ಇದಕ್ಕೆ ತಿರುಗೇಟು ನೀಡಿದ ಈಶ್ವರ್ ಖಂಡ್ರೆ, ಸಚಿವರು ನೇಣು ಹಾಕಿಕೊಳ್ಳುವುದು ಬೇಡ. ಭಾಲ್ಕಿಯಲ್ಲಿ ಯಾರು ಅಕ್ರಮವಾಗಿ ಲೂಟಿ ಮಾಡಿದ್ದಾನೆ. ಆಂತಹ ಭ್ರಷ್ಟ ಅಧಿಕಾರಿಯನ್ನು ಇಟ್ಟುಕೊಂಡು ಅಧಿಕಾರ ನಡೆಸುತ್ತಿರುವ ಇವರಿಗೆ ನೈತಿಕತೆ ಇದೆಯೇ? ಸದನ ಸಮಿತಿ ರಚನೆ ಮಾಡಲಿ. ಇವತ್ತು ನಾನೇನಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ. ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅವರು ತಮ್ಮ ಆರೋಪ ಸಾಬೀತು ಪಡಿಸದಿದ್ದರೆ ರಾಜೀನಾಮೆ ನೀಡಲು ಸಿದ್ಧವೇ? ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು ವರದಿ ಬರಲಿ. ಈಶ್ವರ್ ಖಂಡ್ರೆ ಅಥವಾ ಅಧಿಕಾರಿಗಳು ಯಾರು ತಪ್ಪು ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ತನಿಖೆ ಪ್ರಗತಿಯಲ್ಲಿರುವಾಗ ಶಾಸಕರ ಮೇಲೆ ವೈಯಕ್ತಿಕ ಆರೋಪಗಳನ್ನು ಮಾಡುವುದು ಸರಿಯಲ್ಲ. ಮನೆಗಳ ನಿರ್ಮಾಣಕ್ಕೆ ಶಾಸಕರು ಆದೇಶ ಪತ್ರ ಕೊಡಲು ಸಾಧ್ಯವೇ? ಒಂದು ವೇಳೆ ಶಾಸಕರು ಆದೇಶ ಪತ್ರ ನೀಡಿದ್ದರೆ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೊಡಬೇಕಿರುವ ಕಾರ್ಯಾದೇಶವನ್ನು ಶಾಸಕರು ಕೊಟ್ಟಿದ್ದಾರೆ ಎಂದು ಸಚಿವರು ಆರೋಪ ಮಾಡಿದ್ದಾರೆ. ಒಂದು ವೇಳೆ ಹಾಗೆ ಮಾಡಿದ್ದರೆ ಶಾಸಕರು ಶಿಕ್ಷೆಗೆ ಅರ್ಹರಾಗುತ್ತಾರೆ. ಸಚಿವರು ಮಾಡಿರುವ ಆರೋಪ ಈಗ ಕಡತಕ್ಕೆ ಹೋಗಿದೆ. ಅದರಂತೆ, ಅವರು ದಾಖಲೆ ಕೊಡಲಿ. ಇಲ್ಲದಿದ್ದರೆ, ಸುಳ್ಳು ಆರೋಪ ಆಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News