ಶರ್ಜೀಲ್ ಉಸ್ಮಾನಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Update: 2021-02-04 18:41 GMT

ಲಕ್ನೊ: ಪುಣೆಯಲ್ಲಿ ಜನವರಿ 30ರಂದು ನಡೆದ ಎಲ್ಗರ್ ಪರಿಷದ್ ಸಮಾವೇಶದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿ ಆಲಿಗಢ ಮುಸ್ಲಿಂ ವಿವಿಯ ಮಾಜಿ ವಿದ್ಯಾರ್ಥಿ ನಾಯಕ ಶರ್ಜೀಲ್ ಉಸ್ಮಾನಿ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೇಶದ್ರೋಹ ಸಹಿತ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಉಸ್ಮಾನಿಯ ಭಾಷಣವನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಆಲಿಸಿದ ಅನುರಾಗ್ ಸಿಂಗ್ ಎಂಬ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಲಕ್ನೋದ ಹಝ್ರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಉಸ್ಮಾನಿಯ ಭಾಷಣದಲ್ಲಿ ಆದಿತ್ಯನಾಥ್ ಸರಕಾರದ ವಿರುದ್ಧ ದ್ವೇಷ ಭಾವನೆ ಮೂಡಿಸುವ, ತಂಡಗಳ ಮಧ್ಯೆ ದ್ವೇಷತ್ವಕ್ಕೆ ಪ್ರೇರೇಪಿಸುವ , ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಸಗಿದ ಮತ್ತು ಸರಕಾರದ ವಿರುದ್ಧ ಪಿತೂರಿಗೆ ಸಂಚು ಹೂಡುವ ಅಂಶಗಳಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ವಿವಿಧ ತಂಡಗಳ ಮಧ್ಯೆ ವೈರತ್ವಕ್ಕೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಉಸ್ಮಾನಿ ವಿರುದ್ಧ ಬಿಜೆಪಿ ಯುವಮೋರ್ಚಾದ ಮುಖಂಡ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಮಂಗಳವಾರ ಮತ್ತೊಂದು ಪ್ರಕರಣ ದಾಖಲಿಸಿದ್ದರು. ಉಸ್ಮಾನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹಿತ ಹಲವು ಬಿಜೆಪಿ ಮುಖಂಡರು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್, ಉಸ್ಮಾನಿ ಬಂಧನಕ್ಕೆ ತಂಡವನ್ನು ರಚಿಸಲಾಗಿದೆ ಎಂದಿದ್ದರು.

ಕಳೆದ ವರ್ಷ ಪೌರತ್ವ ಕಾಯ್ದೆಯನ್ನು ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ಆಲಿಗಢ ಮುಸ್ಲಿಂ ವಿವಿಯಲ್ಲಿ ಭುಗಿಲೆದ್ದ ಘರ್ಷಣೆಯಲ್ಲಿ ಉಸ್ಮಾನಿಯ ಪಾತ್ರವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಉಸ್ಮಾನಿಗೆ ಜಾಮೀನು ದೊರಕಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News