×
Ad

ಪೆಟ್ರೋಲ್, ಡಿಸೇಲ್, ಎಲ್ ಪಿ ಜಿ ಬೆಲೆ ಇಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ತಾಹೀರ್ ಹುಸೇನ್

Update: 2021-02-05 23:28 IST

ಭಟ್ಕಳ: ಪೆಟ್ರೋಲ್, ಡೀಸೆಲ್, ಎಲ್ ಪಿ ಜಿ, ಅಗತ್ಯ ವಸ್ತುಗಳು ಬೆಲೆ ಏರಿಕೆ ವಿರುದ್ಧ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉ.ಕ ಜಿಲ್ಲಾ ಸಮಿತಿಯುಭಟ್ಕಳದಲ್ಲಿ  ಶುಕ್ರವಾರ ಪ್ರತಿಭಟನೆ ನಡೆಸಿ ಸಹಾಯಕ ಅಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೆಲ್ಫೇರ್ ಪಾರ್ಟಿಯ ರಾಜ್ಯಾಧ್ಯಕ್ಷ ಅಡ್ವೊಕೇಟ್ ತಾಹೀರ್ ಹುಸೇನ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಮಾನ್ಯ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದು ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು. ಸರ್ಕಾರದಲ್ಲಿರುವವರಿಗೆ ನಾವು ಆರಿಸಿ ಕಳಿಸಿದ್ದು ಜನರ ಸಮಸ್ಯೆಗಳನ್ನು ಬಗೆಹರಿಸಲು, ಆದರೆ ಇಂದು ಸರ್ಕಾರದಲ್ಲಿರುವವರೆ ಜನರನ್ನು ಸಮಸ್ಯೆಗಳಿಗೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಪೆಟ್ರೋಲ್ ಡಿಸೇಲ್ ಹಾಗೂ ಎಲ್ಪಿಜಿ ಬೆಲೆಯನ್ನು ಕಡಿತಗೊಳಿಸುವವರೆಗೂ ನಾವು ಹೋರಾಡುತ್ತೇವೆ. ಇದು ಯಾವುದೇ ಪಕ್ಷದ, ಸಮುದಾಯದ ಸಮಸ್ಯೆಯಲ್ಲ ಬದಲಾಗಿ ಇಡಿ ಸಾಮಾನ್ಯನ ಬದುಕಿನ ಪ್ರಶ್ನೆಯಾಗಿದೆ. ಪೆಟ್ರೋಲ್ ಬಂಕ್ ನವರು ಪೆಟ್ರೋಲ್ ಹಾಕುವಾಗ ನೀವು ಬಿಜೆಪಿಯೋ ಅಥವಾ ಕಾಂಗ್ರೆಸ್ ನವರೋ ಎಂದು ಕೇಳುವುದಿಲ್ಲ. ನೂರು ರೂಪಾಯಿ ನೋಟು ಕೊಟ್ರರೆ ಮಾತ್ರ ಪೆಟ್ರೋಲ್ ಹಾಕುತ್ತಾರೆ. ಆದ್ದರಿಂದ ಪಕ್ಷರಹಿತವಾಗಿ  ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿಕೊಂಡರು.

ಜನರ ದೈನಂದಿನ ಅಗತ್ಯಗಳಾದ ಪೆಟ್ರೋಲ್, ಡೀಸೆಲ್  ಹಾಗೂ ಎಲ್ಪಿಜಿ ಗ್ಯಾಸ್ ಬೆಲೆಯು ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ದೇಶದ ಸಾಮಾನ್ಯ ನಾಗರಿಕನ ಬದುಕು ಕಷ್ಟವಾಗುತ್ತಾ ಸಾಗಿದೆ. ದುಬಾರಿ ಬೆಲೆ ತೆರಲಾರದೇ ದೇಶದ ನಾಗರೀಕರು ಅನೇಕ  ರೀತಿಯ ಆರ್ಥಿಕ ಮುಗ್ಗಟ್ಟುಗಳನ್ನು ಎದುರಿಸುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಟ್ರ‍್ಯಾಕ್ಟರ್, ಬಸ್, ಲಾರಿಗಳ, ಟ್ಯಾಕ್ಸಿ, ಆಟೋ, ಟಂಟಂ ಇತ್ಯಾದಿ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ತರಕಾರಿ, ಹೂವು, ಹಣ್ಣು ಬೆಳೆಸುವ ರೈತರು ತಮ್ಮ ಬೆಳೆಗಳನ್ನು ಮಾರಿ ಪಡೆಯುವುದಕ್ಕಿಂತ ಹೆಚ್ಚಿನ ಹಣವನ್ನು ಸಾಗಾಣಿಕೆಗೆ ಖರ್ಚು ಮಾಡುವ ಸಂಕಷ್ಟ ಎದುರಾಗಿದೆ. ದೇಶದ ಬಹುತೇಕ ಕುಟುಂಬಗಳು ಇಂದು ಅಡುಗೆಗಾಗಿ ಎಲ್ಪಿಜಿ ಸಿಲಿಂಡರ್ಗಳನ್ನು ಅವಲಂಬಿಸಿವೆ. ಫಟ್ಪಾತ್ ಹೋಟೆಲ್ ಗಳಿಂದ ಹಿಡಿದು ದೊಡ್ಡ ಹೋಟೆಲ್ಗಳು ಅಡುಗೆಗಾಗಿ ಎಲ್ಪಿಜಿ ಕಮರ್ಷಿಯಲ್ ಸಿಲಿಂಡರ್ಗಳನ್ನೇ ಅವಲಂಬಿಸಿವೆ. ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್ಗಳಲ್ಲಿ ಚಹ, ತಿಂಡಿಗಳಂತಹ ವಸ್ತುಗಳ ಬೆಲೆ ಏರಿಕೆಯಾಗಿದೆ. ಸಿಲಿಂಡರ್ ಬೆಲೆ ಏರಿಕೆಯಿಂದಲೂ ದೇಶದ ಜನತೆಯ  ಜೇಬಿಗೆ ಕತ್ತರಿ ಬಿದ್ದಿದ್ದೆ. ಈ ಹಿಂದೆ ನೀಡುತ್ತಿದ್ದ ಸಬ್ಸಿಡಿಯನ್ನು ಸರ್ಕಾರ ನೀಡುತ್ತಿಲ್ಲ, ರಾಷ್ಟ್ರಪತಿಗಳು ಈ ಕೂಡಲೇ ಮಧ್ಯ ಪ್ರವೇಶಿಸಿ ಪೆಟ್ರೋಲ್, ಡೀಸೆಲ್ ನಿಯಂತ್ರಿಸಿ ಗೃಹ  ಅನಿಲ ಗ್ಯಾಸ್ ಸಿಲಿಂಡರ್ಗಳ ಮೇಲೆ ಸಬ್ಸಿಡಿ ನೀಡಿ, ಸಿಲಿಂಡರ್ ಬೆಲೆ ಕಡಿತಗೊಳಿಸಲು ಸೂಕ್ತ ಕ್ರಮ  ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿಯಿಂದ  ಕೋರುತ್ತೇವೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. 

ಈ ಸಂದರ್ಭ ಉ.ಕ ಜಿಲ್ಲಾಧ್ಯಕ್ಷ ಡಾ.ನಸೀಮ್ ಖಾನ್, ಪ್ರ.ಕಾ. ಆಸೀಫ್ ಶೇಕ್, ಉಪಾಧ್ಯಕ್ಷ ಶೌಕತ್ ಕತೀಬ್, ಅಬ್ದುಲ್ ಜಬ್ಬಾರ್ ಅಸದಿ, ಅನಂ ಅಲಾ ಎಂ.ಟಿ, ಅಸ್ಲಂ ವಲ್ಕಿ, ಅಬ್ದುಲ್ ಮಾಜಿದ್ ಕೋಲಾ, ಸೇರಿದಂತೆ ಹಲವು ಮುಖಂಡರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News