ಈ ದಮನಸತ್ರ ಆಂತರಿಕ ವಿಷಯವಲ್ಲ

Update: 2021-02-06 05:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದಲ್ಲಿ ತಮ್ಮ ಬೇಡಿಕೆಗಳಿಗಾಗಿ ರೈತರು ನಡೆಸಿರುವ ಶಾಂತಿಯುತ ಚಳವಳಿಯ ಬಗ್ಗೆ ಅಂತರ್‌ರಾಷ್ಟ್ರೀಯ ಮಟ್ಟದ ಖ್ಯಾತ ಗಾಯಕಿ ರಿಯಾನ್ನರ ಒಂದು ಸಾಲಿನ ಟ್ವೀಟ್‌ನಿಂದ ನಮ್ಮ ಬಲಿಷ್ಠ ಮೋದಿ ಸರಕಾರ ದಿಗಿಲುಗೊಂಡಿದೆ. ರಿಯಾನ್ನ ನಂತರ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್ ರೈತ ಹೋರಾಟದ ರೂಪುರೇಷೆಗಳನ್ನು (ಟೂಲ್‌ಕಿಟ್) ಜಾಲತಾಣದಲ್ಲಿ ಹಂಚಿಕೊಂಡಿರುವುದು ಬಿರುಗಾಳಿಯನ್ನೇ ಎಬ್ಬಿಸಿದೆ. ಅಮೆರಿಕದ ಗೃಹ ಸಚಿವಾಲಯದ ಹೇಳಿಕೆಯೂ ನಮ್ಮ ಸರಕಾರದ ತಾಳ್ಮೆಗೆಡಿಸಿದೆ. ಇವುಗಳಿಂದ ಭಾರತದ ಸಾರ್ವಭೌಮತ್ವಕ್ಕೆ ಗಂಡಾಂತರ ಎದುರಾಗಿದೆ ಎಂಬಂತೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಗತ್ತೇ ಒಂದು ದೊಡ್ಡ ಹಳ್ಳಿಯಾಗಿರುವ ಇಂಟರ್ನೆಟ್ ಯುಗದಲ್ಲಿ ಇವೆಲ್ಲ ಸಾಮಾನ್ಯ ಸಂಗತಿ. ಇದರ ಬಗ್ಗೆ ಇಷ್ಟೊಂದು ಗಾಬರಿಯಾಗುವ ಅಗತ್ಯವಿರಲಿಲ್ಲ. ಜಗತ್ತಿನ ಎಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಇಂತಹ ಪ್ರತಿಕ್ರಿಯೆಗಳು ಗಡಿಯಾಚೆಯಿಂದಲೂ ವ್ಯಕ್ತವಾಗುತ್ತವೆ. ಹಿಟ್ಲರ್‌ನ ಜರ್ಮನಿಯಲ್ಲಿ ನರಮೇಧ ನಡೆದಾಗ, ಚೀನಾದ ತಿಯನಾನ್ಮೆನ್ ಚೌಕ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ನಿರ್ದಯವಾಗಿ ಹತ್ತಿಕ್ಕಿದಾಗ, ದಕ್ಷಿಣ ಆಫ್ರಿಕಾ ದಲ್ಲಿ ವರ್ಣಭೇದ ನೀತಿಯ ವಿರುದ್ಧ, ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ದೌರ್ಜನ್ಯ ನಡೆಸಿದಾಗೆಲ್ಲ ಜಗತ್ತಿನ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಭಾರತದ ರೈತರ ಶಾಂತಿಯುತ ಪ್ರತಿಭಟನೆಯನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಹತ್ತಿಕ್ಕುತ್ತಿರುವ ರೀತಿಯ ಬಗ್ಗೆ ಸಹಜವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಸುಮಾರು ಎಪ್ಪತ್ತು ದಿನಗಳಿಂದ ಶಾಂತಿಯುತ ಚಳವಳಿಯನ್ನು ನಡೆಸುತ್ತಿರುವ ರೈತರ ಬಗ್ಗೆ ಸರಕಾರ ಸಹಾನುಭೂತಿ ತೋರಿಸಲಿಲ್ಲ ಎಂಬುದು ನಿಜ. ಅದರಲ್ಲೂ ಜನವರಿ 26ರ ಗಣರಾಜ್ಯೋತ್ಸವದ ನಂತರ ಈ ರೈತ ಹೋರಾಟವನ್ನು ಹತ್ತಿಕ್ಕಲು ಸರಕಾರ ಅನುಸರಿಸುತ್ತಿರುವ ದಮನಸತ್ರದ ನೀತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.

 ರಾಜಧಾನಿ ದಿಲ್ಲಿಯ ಮೂರು ಗಡಿಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ರೈತರ ಶಿಬಿರಗಳ ಸುತ್ತ ಪೊಲೀಸರ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿ ಶಿಬಿರದ ಸುತ್ತಲೂ ಕಾಂಕ್ರಿಟ್ ಸುರಿದು ಒಂದು ಅಡಿಗೂ ಹೆಚ್ಚು ಉದ್ದದ ಸಾವಿರಾರು ಕಬ್ಬಿಣದ ಮೊಳೆಗಳನ್ನು ನೆಡುವುದು, ಕುಡಿಯುವ ನೀರು, ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವುದು, ರೈತರ ಶಿಬಿರಗಳಿಗೆ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯುವ ವಾಹನಗಳನ್ನು ತಡೆಯುವುದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲದೆ ಮತ್ತೇನು? ಇಂತಹ ಪ್ರಶ್ನೆಗಳಲ್ಲಿ ಸಹಜವಾಗಿ ಅಂತರ್ ರಾಷ್ಟ್ರೀಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇಂತಹ ಪ್ರತಿಕ್ರಿಯೆಗಳನ್ನು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂದು ಪರಿಗಣಿಸಬೇಕಾಗಿಲ್ಲ.

2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆದಾಗಲೂ ಆಗ ಅಲ್ಲಿ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಇದು ಗುಜರಾತಿನ ಆಂತರಿಕ ವಿಷಯ. ಗುಜರಾತ್‌ನ ಹೆಸರು ಕೆಡಿಸಲು ನೀವು ಹತ್ಯಾಕಾಂಡವನ್ನು ಖಂಡಿಸುತ್ತಿದ್ದೀರಿ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದರು. ಆಗ ಒಂದು ಅಲ್ಪಸಂಖ್ಯಾತ ಜನಸಮುದಾಯದ ವಿರುದ್ಧ ಬಹುಸಂಖ್ಯಾತರಲ್ಲಿ ಕೋಮು ಉನ್ಮಾದ ಕೆರಳಿಸಿ ಚುನಾವಣೆಯಲ್ಲಿ ಗೆದ್ದು ಬಂದರು. ಅದೇ ತಂತ್ರವನ್ನು ರೈತ ಹೋರಾಟದ ಸಂದರ್ಭದಲ್ಲಿ ಅನುಸರಿಸುತ್ತಿರುವುದು ಸರಕಾರದ ಹತಾಶೆ ಮತ್ತು ಅಸಹಾಯಕತೆಯನ್ನು ತೋರಿಸಿಕೊಡುತ್ತಿದೆ.

ರೈತರ ಪ್ರತಿಭಟನೆಯ ಬಗ್ಗೆ ಜಾಗತಿಕವಾಗಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಯನ್ನು ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಕೇಂದ್ರ ಸರಕಾರ ಪರಿಗಣಿಸುವುದಾದರೆ ಪ್ರಧಾನಿ ಮೋದಿಯವರು ಅಮೆರಿಕಕ್ಕೆ ಹೋಗಿ ಬಹಿರಂಗವಾಗಿ ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದು ಕೂಗಿದ್ದು ಆ ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದಂತಲ್ಲವೇ? ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಚುನಾವಣೆ ನಡೆದಾಗ ಸೋತ ಟ್ರಂಪ್ ಬೆಂಬಲಿಗರು ಅಲ್ಲಿನ ಆಡಳಿತ ಕೇಂದ್ರಕ್ಕೆ ಮುತ್ತಿಗೆ ಹಾಕಿದಾಗ ಪ್ರಧಾನಿ ಮೋದಿ ಅದನ್ನು ಖಂಡಿಸಿ ಟ್ವೀಟ್ ಮಾಡಿದ್ದರು; ಇದು ಕೂಡ ಇನ್ನೊಂದು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಎಂದು ಪರಿಗಣಿಸಬಹುದಲ್ಲವೇ?

ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿರುವ ಹೋರಾಟವನ್ನು ಸರಕಾರ ನಿಭಾಯಿಸುತ್ತಿರುವ ರೀತಿಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ರೈತ ಹೋರಾಟವನ್ನು ಬೆಂಬಲಿಸುವ ಟ್ವಿಟರ್ ಖಾತೆಗಳನ್ನು ಅಮಾನತ್‌ನಲ್ಲಿಡುವುದು, ರಾಜ್‌ದೀಪ್ ಸರ್ದೇಸಾಯಿ, ಸಿದ್ಧಾರ್ಥ ವರದರಾಜನ್‌ರಂತಹ ಪತ್ರಕರ್ತರು ಮತ್ತು ಸಂಸದ ಶಶಿ ತರೂರ್‌ರ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಪ್ರಕರಣ ದಾಖಲಿಸುವುದು ಸರಕಾರದ ದಮನಸತ್ರವಲ್ಲದೆ ಬೇರೇನೂ ಅಲ್ಲ. ಯಾವುದೇ ಪ್ರಜಾಪ್ರಭುತ್ವಕ್ಕೆ ಇದು ಶೋಭೆ ತರುವುದಿಲ್ಲ.

ಈಗಲೂ ಕಾಲ ಮಿಂಚಿಲ್ಲ. ಸರಕಾರ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಶತ್ರುಗಳೆಂದು ಪರಿಗಣಿಸದೆ ಅವರ ಬೇಡಿಕೆಯನ್ನು ಸಹಾನುಭೂತಿಯಿಂದ ಆಲಿಸಬೇಕು. ರೈತರ ಚಳವಳಿಗೆ ಖಾಲಿಸ್ತಾನದ ನಂಟು ಅಂಟಿಸುವ ಕುಟಿಲತನ ಮಾಡಬಾರದು. ರೈತರು ಮತ್ತು ಅವರ ಪರವಾಗಿ ಧ್ವನಿಯೆತ್ತಿದವರ ಮೇಲೆ ಹಾಕಿದ ಸುಳ್ಳು ಖಟ್ಲೆಗಳನ್ನು ವಾಪಸ್ ಪಡೆಯಬೇಕು. ರೈತರಿಗೆ ಬೇಡವಾದ ಕೃಷಿ ಕಾಯ್ದೆಗಳನ್ನು ಕೈ ಬಿಡಬೇಕು. ದಮನ ನೀತಿಯಿಂದ ಈ ಸಮಸ್ಯೆಯನ್ನು ಪರಿಹರಿಸಲು ಹೊರಟರೆ ಅದು ಸರಕಾರಕ್ಕೆ ತಿರುಗುಬಾಣವಾಗುತ್ತದೆ. ಆದ್ದರಿಂದ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಪರಿಹಾರದ ದಾರಿಯನ್ನು ಹುಡುಕಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News