ಸರಕಾರ ಯಾವುದೇ ಗೋ ಶಾಲೆಗಳನ್ನು ಸ್ಥಾಪನೆ ಮಾಡಿಲ್ಲ: ಸಚಿವ ಪ್ರಭು ಚೌಹಾಣ್

Update: 2021-02-05 18:13 GMT

ಬೆಂಗಳೂರು, ಫೆ.5: ರಾಜ್ಯದಲ್ಲಿ ಸದ್ಯ 188 ಗೋಶಾಲೆಗಳು ಚಾಲ್ತಿಯಲ್ಲಿದ್ದು, ಈ ಎಲ್ಲ ಶಾಲೆಗಳನ್ನು ಖಾಸಗಿ, ಸ್ವಯಂ ಸೇವಾ ಸಂಘ ಇತ್ಯಾದಿ ನಡೆಸಿಕೊಂಡು ಬರುತ್ತಿದೆ. ಸರಕಾರ ಈವರೆಗೆ ಯಾವುದೇ ಗೋ ಶಾಲೆಗಳನ್ನು ಸ್ಥಾಪನೆ ಮಾಡಿರುವುದಿಲ್ಲ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚೌಹಾಣ್ ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ಸರಕಾರದ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರಿಗೆ, ವೃತ್ತಿ ನಿರತ ಹಾಗೂ ಖಾದ್ಯ ಸೇವನೆ ಮಾಡುವವರಿಗೆ ಯಾವುದೇ ಗಂಭೀರ ಸಮಸ್ಯೆಗಳು ಆಗಿರುವುದು ಸರಕಾರದ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ವಯಸ್ಸಾದ ಮತ್ತು ಹೊಲದಲ್ಲಿ ಉಳುಮೆ ಮಾಡಲು ಸಾಧ್ಯವಾಗದೇ ಸಾಕಲು ಹೊರೆ ಅನ್ನಿಸುವಂಥ ಗೋವುಗಳನ್ನು ಗೋಶಾಲೆಗಳಿಗೆ ಸರಕಾರದಿಂದ ನಿಯಮಾನುಸಾರ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ 4,212 ಪಶು ವೈದ್ಯಕೀಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಪಾಲಿ ಕ್ಲಿನಿಕ್ 30, ಪಶು ಆಸ್ಪತ್ರೆ 665, ಪಶುಚಿಕಿತ್ಸಾಲಯ 2,135, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ 1,206, ಸಂಚಾರಿ ಪಶು ಚಿಕಿತ್ಸಾಲಯ 176 ಇವೆ ಎಂದು ತಿಳಿಸಿದರು.

1206 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಲ್ಲಿ ಪಶುವೈದ್ಯರ ಹುದ್ದೆಗಳಿರುವುದಿಲ್ಲ. ಒಟ್ಟು 3308 ಪಶುವೈದ್ಯರ ಹುದ್ದೆಗಳು ಮಂಜೂರಾಗಿವೆ. ಒಟ್ಟು 2082 ಪಶು ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.        

ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ರಾಜ್ಯ ಸರಕಾರ ಜಾರಿಗೆ ತರುತ್ತಿರುವ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಲಕ್ಷಾಂತರ ಜನರು ನಿರುದ್ಯೋಗಿಗಳು ಆಗುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News