ಹುಣಸೋಡು ಸ್ಫೋಟ ಪ್ರಕರಣದ ಹಿಂದೆ ಬಿಜೆಪಿ ರಾಜಕಾರಣಿಗಳ ಕೈವಾಡವಿದೆ: ಪುಷ್ಪಾ ಅಮರನಾಥ್

Update: 2021-02-06 16:49 GMT

ಶಿವಮೊಗ್ಗ,ಫೆ.06: ಶಿವಮೊಗ್ಗದಲ್ಲಿ 6 ಜನರ ಸಾವಿಗೆ ಕಾರಣವಾದ ಹುಣಸೋಡು ಸ್ಫೋಟ ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಇದರ ಹಿಂದೆ ಬಿಜೆಪಿ ರಾಜಕಾರಣಿಗಳ ಕೈವಾಡವಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹುಣಸೋಡು ಸ್ಫೋಟ ಪ್ರಕರಣದ ಹಿಂದೆ ಬಿಜೆಪಿ ರಾಜಕಾರಣಿಗಳ ಕೈವಾಡವಿದೆ. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಇಲಾಖೆಗಳ ಅಧಿಕಾರಿಗಳಿಗೆ ಕಣ್ಣುಮುಚ್ಚಿ ಕುಳಿತುಕೊಳ್ಳಿ ಎಂದು ಸೂಚನೆ ನೀಡಿದ್ದರು. ಇದನ್ನು ನೋಡಿದರೆ ನಿಷ್ಪಕ್ಷ ತನಿಖೆಯಾಗುವುದು ಅನುಮಾನ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ ಅವರು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರಕಾರದಲ್ಲಿ ಬಡವರ ಬದುಕು ಭಾರವಾಗಿದೆ ಎಂದು ಟೀಕಿಸಿದ ಅವರು, ಬಿಜೆಪಿ ಸರಕಾದಲ್ಲಿ ಸಾಮಾನ್ಯ ಜನರು ನೆಮ್ಮದಿಯಾಗಿಲ್ಲ. ಮಾನವೀಯತೆಯೇ ಸರಕಾರಕ್ಕಿಲ್ಲ. ಆಳುವ ಸರಕಾರಗಳು ಕಣ್ಮುಚ್ಚಿಕೊಂಡು ಕುಳಿತಿವೆ. ಬೆಲೆ ಏರಿಕೆಯ ಬಿಸಿ ಬಡವರನ್ನು ಹೈರಾಣು ಮಾಡಿದೆ. ಹೆಣ್ಣು ಮಕ್ಕಳಿಗೆ ರಕ್ಷಣೆಯೇ ಇಲ್ಲ ಎಂದು ದೂರಿದರು.

ಮೋದಿ ಸರಕಾರದಲ್ಲಿ ಅಚ್ಛೇ ದಿನದ ಘೋಷಣೆಯಾಗಿತ್ತು. ಆದರೆ ಅದು ಇಂದು ಕೊಚ್ಚೆ ದಿನವಾಗಿದೆ. ಗ್ಯಾಸ್ ಬೆಲೆ, ತೈಲಬೆಲೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಷ್ಟಾದರೂ ಮೋದಿ ಭಕ್ತರು ದೇಶಕ್ಕಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಿದ್ದಾರೆ. ಈ ಬಿಜೆಪಿ ಸರಕಾರ ದೇಶ ಭಕ್ತರಿಗಾಗಿಯೇ ಪ್ರತ್ಯೇಕ ಗ್ಯಾಸ್, ಪೆಟ್ರೋಲ್ ಬೆಲೆ ಏರಿಸಲಿ. ಜನ ಸಾಮಾನ್ಯರಿಗೆ ಬಡವರಿಗೆ ಬಿಪಿಎಲ್ ಕಾರ್ಡ್ ಗಳ ಮೂಲಕ ಸಬ್ಸಿಡಿ ನೀಡಲಿ. ಆಗ ಗೊತ್ತಾಗುತ್ತದೆ ದೇಶ ಭಕ್ತ ಯಾರು ಎಂದು ವ್ಯಂಗ್ಯವಾಡಿದರು.

ಪ್ರಗತಿಪರ ಚಿಂತಕ ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವುದನ್ನು ವಿರೋಧಿಸಿದ ಅವರು, ವಕೀಲೆಯಾಗಿ ಈ ರೀತಿ ಮಾಡಿರುವುದು ತಪ್ಪು. ಇದು ಭಾರತೀಯ ಸಂಸ್ಕೃತಿಯಂತೂ ಅಲ್ಲ. ಇದರ ಹಿಂದೆ ಪ್ರಚಾರದ ಉದ್ದೇಶ ಬಿಟ್ಟರೆ ಬೇರೆ ಏನು ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕವಿತ, ವಿಜಯಲಕ್ಷ್ಮೀ ಪಾಟೀಲ್, ಸೌಂಗಧಿಕ, ಫರಿದಾಖಾನಂ, ಗೌಸಿಯಾ ವಾಜಿಯ, ರೇಷ್ಮ, ಸುರ‍್ಣನಾಗರಾಜ್, ಸೆಲ್ವ ಮರ‍್ಟಿನ್, ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News