ದಿಲ್ಲಿ ರೈತರ ಚಳವಳಿ ಬೆಂಬಲಿಸಿ ಶಿವಮೊಗ್ಗದಲ್ಲಿ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಶಿವಮೊಗ್ಗ, ಫೆ.06: ಕೇಂದ್ರ ಸರಕಾರದ ರೈತ ವಿರೋಧಿ ಮೂರು ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದಿಲ್ಲಿ ಗಡಿ ಭಾಗದಲ್ಲಿ ನಡೆಯುತ್ತಿರುವ ರೈತರ ಚಳವಳಿ ಬೆಂಬಲಿಸಿ ಇಂದು ಸಾಗರ ರಸ್ತೆಯಲ್ಲಿರುವ ನಂಜಪ್ಪ ಲೈಫ್ ಕೇರ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.
ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿರುವ ಸರಕಾರ ಕಾಯಿದೆಗಳಿಗೆ ತಿದ್ದುಪಡಿ ತಂದು ರೈತರ ಮೇಲೆ ಪ್ರಹಾರ ಮಾಡುತ್ತಿದೆ. ದಿಲ್ಲಿ ಗಡಿಭಾಗದ ಹೆದ್ದಾರಿಗಳಲ್ಲಿ ಕಾಂಕ್ರೀಟ್ ಗೋಡೆಗಳನ್ನು ನಿರ್ಮಿಸಿದ್ದೂ ಅಲ್ಲದೆ ಕಬ್ಬಿಣದ ಮೊಳೆಗಳನ್ನು ರಸ್ತೆಗೆ ಅಳವಡಿಸಿ ಹೇಡಿತನ ಪ್ರದರ್ಶನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜ.26ರ ರೈತರ ಹೋರಾಟದ ದಿನ ಸರಕಾರಿ ಪ್ರಾಯೋಜಿತ ಕಿಡಿಗೇಡಿಗಳು ಕೆಂಪು ಕೋಟೆ ಮೇಲೆ ಅನ್ಯ ಧ್ವಜ ಹಾರಿಸುವ ಮೂಲಕ ರೈತ ಚಳವಳಿಗೆ ಕಳಂಕ ತರುವ ಕೆಲಸ ಮಾಡಿರುವುದು ಖಂಡನೀಯ. ಈ ಘಟನೆಯನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಬಂಧಿಸಿರುವ ಅಮಾಯಕ ರೈತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಹೆದ್ದಾರಿ ತಡೆಯಿಂದಾಗಿ ಶಿವಮೊಗ್ಗ-ಸಾಗರ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಪರ್ಯಾಯ ರಸ್ತೆ ಮೂಲಕ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್ಗಳ ಸಂಚಾರವನ್ನು ಸ್ವಲ್ಪ ಸಮಯ ತಡೆ ಹಿಡಿಯಲಾಗಿತ್ತು.
ಸ್ಥಳದಲ್ಲಿ ಹೆಚ್ವಿನ ಪೊಲೀಸ್ ಬಂದೋಬಸ್ತ್ ಮಾಡಿ ಯಾವುದೇ ಅಹಿಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿತ್ತು.
ಚಳವಳಿಯಲ್ಲಿ ರೈತ ಮುಖಂಡ ಎಚ್. ಆರ್. ಬಸವರಾಜಪ್ಪ, ಕೆ. ರಾಘವೇಂದ್ರ, ಇ.ಬಿ. ಜಗದೀಶ್, ಎಸ್. ಶಿವಮೂರ್ತಿ, ಸಿ. ಚಂದ್ರಪ್ಪ, ಕಸಟ್ಟಿ ರುದ್ರೇಶ್, ಹಿಟ್ಟೂರು ರಾಜು, ಕಾಂಗ್ರೆಸ್ ಮುಖಂಡ ಎನ್. ರಮೇಶ್, ಡಿಎಸ್ಎಸ್ನ ಟಿ.ಎಚ್. ಹಾಲೇಶಪ್ಪ, ಜನಶಕ್ತಿ ಸಂಘಟನೆಯ ಕೆ.ಎಲ್. ಅಶೋಕ್, ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.