ಮೇ9ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ: ಮೇ12ರಂದು ಫಲಿತಾಂಶ ಪ್ರಕಟ

Update: 2021-02-07 12:20 GMT

ಬೆಂಗಳೂರು, ಫೆ. 7: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು(ಕಸಾಪ) ಚುನಾವಣಾ ದಿನಾಂಕ ನಿಗದಿಪಡಿಸಲಾಗಿದೆ. 2021ರ ಮೇ 9ಕ್ಕೆ ಮತದಾನ ನಡೆಲಿದ್ದು ಮೇ 12ಕ್ಕೆ ಕೇಂದ್ರ ಕಸಾಪ ಅಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕಸಾಪ ಕೇಂದ್ರ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಕಸಾಪ ಚುನಾವಣಾ ಸುಧಾರಣೆ ಸಲಹಾ ಸಮಿತಿ ಹಾಲಿ ಸದಸ್ಯರಾದ ಎಸ್.ಟಿ.ಮೋಹನ್ ರಾಜ್ ಅವರನ್ನು ವಿಶೇಷ ಚುನಾವಣಾಧಿಕಾರಿಯನ್ನಾಗಿ ನೇಮಿಸಿದ್ದು, ಮತದಾರರ ಅನುಕೂಲಕಕ್ಕಾಗಿ ಇದೇ ಮೊದಲ ಬಾರಿಗೆ ಮೊಬೈಲ್ ಆಪ್ electionkasapa2021 ರೂಪಿಸಲಾಗಿದೆ. (ಐದು ದಿನಗಳ ನಂತರ ಪ್ಲೇ ಸ್ಟೋರ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ) ಹಾಗೂ ಕಸಾಪ ಅಧಿಕೃತ ವೆಬ್‍ಸೈಟ್ www.kasapa.in ನಲ್ಲಿಯೂ ಸುಲಭವಾಗಿ ಹುಡುಕಿ ವಿವರಗಳನ್ನು ಪಡೆಯುವ ಹಾಗೆ (ಸರ್ಚಿಂಗ್) ಆಯ್ಕೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮತದಾರರ ಪಟ್ಟಿಯ ಬಗ್ಗೆ ಆಕ್ಷೇಪಗಳೆನಾದರೂ ಇದ್ದರೆ ಅವುಗಳನ್ನು ಆಯಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಲು ಫೆ.22ರ ಒಳಗಾಗಿ ಸಲ್ಲಿಸಬಹುದು. ಮಾರ್ಚ್ 25ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಬಾರಿಯ ಚುನಾವಣೆಯಲ್ಲಿ ಅಂದಾಜು 3,10,520 ಮಂದಿ ಮತದಾರರಿದ್ದಾರೆ.

ಮತದಾರ-ಅಭ್ಯರ್ಥಿ: ಚುನಾವಣೆ ದಿನಾಂಕಕ್ಕೆ 2021ರ ಮೇ 9ಕ್ಕೆ ಮೂರು ವರ್ಷಗಳ ಹಿಂದಿನಿಂದ ಸತತವಾಗಿ ಕಸಾಪ ಸದಸ್ಯರಾಗಿರುವವರು ಮಾತ್ರ ಮತದಾನ ಮಾಡಲು ಅರ್ಹರು. ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಚುನಾವಣಾ ದಿನಾಂಕಕ್ಕೆ 10 ವರ್ಷಗಳ ಹಿಂದಿನಿಂದ ಸತತವಾಗಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು ಐದು ವರ್ಷಗಳ ಹಿಂದಿನಿಂದ ಕಸಾಪ ಸದಸ್ಯರಾಗಿರಬೇಕು ಎಂದು ತಿಳಿಸಲಾಗಿದೆ.

ನಾಮಪತ್ರ: ಕಸಾಪ ಕೇಂದ್ರ ಸಮಿತಿ, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮಾರ್ಚ್ 29ರಿಂದ ಎಪ್ರಿಲ್ 7ರ ವರೆಗೆ ಪ್ರತಿನಿತ್ಯ ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಅವಕಾಶವಿದೆ. ನಾಮಪತ್ರದ ನಮೂನೆ ಒಂದು ಪ್ರತಿಗೆ 10 ರೂ.ನಂತೆ ಪಾವತಿಸಿ ಕಚೇರಿ ವೇಳೆಯಲ್ಲಿ ಪಡೆಯಬಹುದು. ಎಪ್ರಿಲ್ 8ಕ್ಕೆ ನಾಮಪತ್ರ ಪರಿಶೀಲನೆ. ನಾಮಪತ್ರ ಹಿಂಪಡೆಯಲು ಎಪ್ರಿಲ್ 12ರ ಸೋಮವಾರ ಮಧ್ಯಾಹ್ನ 3ಗಂಟೆಯ ವರೆಗೆ ಅವಕಾಶವಿದ್ದು, ಅಂದೇ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು.

ಗಡಿನಾಡು/ಹೊರನಾಡು ಮತದಾರರಿಗೆ ಎಪ್ರಿಲ್ 23ರಂದು ಕಸಾಪ ನಿಬಂಧನೆಯಂತೆ ರಿಜಿಸ್ಟರ್ಡ್ ಅಂಚೆಯ ಮೂಲಕ ಮತಪತ್ರಗಳನ್ನು ರವಾನಿಸಲಾಗುವುದು. ಈ ರೀತಿ ತಮಗೆ ತಲುಪಿಸಿದ ಮತಪತ್ರಗಳಲ್ಲಿ ‘ರೈಟ್‍ಮಾರ್ಕ್' ಮಾಡುವುದರ ಮೂಲಕ ಮತ ಚಲಾಯಿಸಿ ಮತಪತ್ರಗಳನ್ನು ಮೇ 11ರ ಬೆಳಗ್ಗೆ 11ಗಂಟೆಗೆ ಬೆಂಗಳೂರಿನಲ್ಲಿರುವ ಕೇಂದ್ರ ಚುನಾವಣಾಧಿಕಾರಿಗಳ ಕಚೇರಿ ತಲುಪುವ ಮತಪತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುವುದು.

ರಾಜ್ಯಾದಂತ ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರು ಅವರಿಗೆ ಗೊತ್ತುಪಡಿಸಿರುವ ಮತಗಟ್ಟೆಗಳಲ್ಲಿ ಮೇ 9ರ ರವಿವಾರ ಬೆಳಗ್ಗೆ 8ಗಂಟೆಯಿಂದ ಸಂಜೆ 4ಗಂಟೆಯ ವರೆಗೆ ತಮ್ಮ ಮತವನ್ನು ಚಲಾಯಿಸಬಹುದು. ಎಪ್ರಿಲ್ 11ಕ್ಕೆ ಕೇಂದ್ರ ಕಚೇರಿಯಲ್ಲಿ ಅಂಚೆ ಮತಪತ್ರ ಎಣಿಕೆ ಮಾಡಿ, ಗಡಿನಾಡು ಘಟಕಗಳ ಅಧ್ಯಕ್ಷರ, ಎಪ್ರಿಲ್ 12ರಂದು ಕೇಂದ್ರ ಕಸಾಪ ಅಧ್ಯಕ್ಷರ ಫಲಿತಾಂಶವನ್ನು ಘೋಷಣೆ ಮಾಡಲಾಗುವುದು ಎಂದು ಗಂಗಾಧರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News