ಕೃಷಿ ಸುಧಾರಣಾ ಕಾಯ್ದೆಗಳ ಜನಜಾಗೃತಿಗೆ ವರ್ಚುವಲ್ ಸಭೆ: ಡಾ.ಅಶ್ವತ್ಥನಾರಾಯಣ

Update: 2021-02-07 17:02 GMT

ಬೆಂಗಳೂರು, ಫೆ.7: ಕೇಂದ್ರದ ಕೃಷಿ ಸುಧಾರಣಾ ಕಾಯಿದೆಗಳ ಕುರಿತು ಜನಜಾಗೃತಿ ಮೂಡಿಸಲು ಇನ್ನು 10 ದಿನಗಳ ಒಳಗಾಗಿ ರಾಜ್ಯದಲ್ಲಿ ಜನಜಾಗೃತಿ ವರ್ಚುವಲ್ ಸಭೆಗಳನ್ನು ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ರವಿವಾರ ನಗರದ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಏರ್ಪಡಿಸಿದ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಕೃಷಿ ಸುಧಾರಣಾ ಮಸೂದೆಗಳ ಕುರಿತು ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಮಾಹಿತಿ ನೀಡುತ್ತಿವೆ. ಮಸಿ ಬಳಿಯುವ ಕೆಲಸ ನಡೆದಿದೆ. ಇದನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.

ಹೊಸ ಕಾಯಿದೆಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹೊಸತನ ಬರಲಿದೆ. ಬಹುಹಂತದ ಮಾರಾಟ ವ್ಯವಸ್ಥೆಯ ಬದಲಾಗಿ ವ್ಯಾಪಾರಿ-ರೈತರ ನಡುವೆ ನೇರವಾಗಿ ವ್ಯವಹಾರ ನಡೆದು ರೈತರ ಆದಾಯ ಹೆಚ್ಚಲಿದೆ ಎಂದು ಅವರು ತಿಳಿಸಿದರು.

ಪ್ರಧಾನಿನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಮತ್ತು ದೂರದೃಷ್ಟಿಯ ಚಿಂತನೆಗಳಿಂದ ದೇಶವು ಭ್ರಷ್ಟಾಚಾರ, ಹಗರಣ ಮುಕ್ತವಾಗಿ ಮುನ್ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರವು ರಾಜ್ಯವನ್ನು ಸರ್ವಾಂಗೀಣ ಪ್ರಗತಿಯತ್ತ ಒಯ್ಯುತ್ತಿದೆ ಎಂದು ಅವರು ವಿವರಿಸಿದರು.

ರಾಜ್ಯ ಸರಕಾರದ ಯೋಜನೆಗಳ ವಿವರವನ್ನು ಇನ್ನಷ್ಟು ಸಮಗ್ರ ಮತ್ತು ಪರಿಣಾಮಕಾರಿಯಾಗಿ ಮುಂದೆ ವೆಬ್‍ಸೈಟ್‍ಗಳಲ್ಲಿ ಒದಗಿಸಲಾಗುವುದು ಎಂದ ಅವರು, 2023ರಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಉತ್ತಮ ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಮೋಹನ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್‍ ಕುಮಾರ್ ಸುರಾಣ, ರಾಜ್ಯ ಸಂಚಾಲಕ ವಿನೋದ್ ಕೃಷ್ಣಮೂರ್ತಿ ಹಾಗೂ ರಾಜ್ಯದ ಸಹ ಸಂಚಾಲಕ ಪ್ರಶಾಂತ್ ಜಾಧವ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News