ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಮೀಕ್ಷೆ: 20ಕ್ಕೂ ಹೆಚ್ಚು ಹಕ್ಕಿ ಪ್ರಬೇಧಗಳು ಪತ್ತೆ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಪಕ್ಷಿಗಳ ಸಮೀಕ್ಷೆಯಲ್ಲಿ ಕೆಲವು ಅಪರೂಪದ ಪಕ್ಷಿಗಳು ದರ್ಶನ ನೀಡಿವೆ.
ಮಟ ಪಕ್ಷಿ (ರೂಫಸ್ ಟ್ರೀಪೀ), ಅಯೊರಾ, ಕಂಚುಗಾರ ಹಕ್ಕಿ, ಸ್ಟಾರ್ಲಿಂಗ್, ಬುಲ್ ಬುಲ್ ಪ್ಲೈ ಕ್ಯಾಚರ್, ಗ್ರೇ ಟಿಟ್ ಸೇರಿದಂತೆ 20ಕ್ಕೂ ಹೆಚ್ಚು ಹಕ್ಕಿ ಪ್ರಬೇಧಗಳು ಕಂಡುಬಂದಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದವರು ಮಾಹಿತಿ ನೀಡಿದ್ದಾರೆ.
ಎರಡನೇ ದಿನ 90ಕ್ಕೂ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಕಾಣುವ ಪಕ್ಷಿಗಳ ಪೋಟೊ ತೆಗೆದು, ಗಾತ್ರ, ಬಣ್ಣ, ಲಕ್ಷಣಗಳನ್ನು ಗುರುತಿಸಿ ಮಾಹಿತಿಗಳನ್ನು ತಜ್ಞರು ದಾಖಲು ಮಾಡಿಕೊಂಡಿದ್ದು, ನಂತರ ಅವುಗಳನ್ನು ವಿಶ್ಲೇಷಿಸಲಿದ್ದಾರೆ. ಹಿಂದೆ ಯಾವೆಲ್ಲ ಪ್ರಭೇದದ ಪಕ್ಷಿಗಳು ಕಂಡು ಬಂದಿವೆ ಎಂಬ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.
‘ಪಕ್ಷಿಗಳನ್ನು ಗುರುತಿಸುವುದು ಸುಲಭವಲ್ಲ. ಅವುಗಳ ಬಗ್ಗೆ ಅಧ್ಯಯನ ಮಾಡಿರುವವರಿಗೆ ಮಾತ್ರ ಸಾಧ್ಯ, ಕೆಲವು ಗುಬ್ಬಚ್ಚಿ ಗಾತ್ರದ ಹಕ್ಕಿಗಳಂತೆ ಇರುತ್ತದೆ. ಬಣ್ಣ ಲಕ್ಷಣಗಳು ಒಂದೇ ರೀತಿಯಲ್ಲಿ ಇರುತ್ತವೆ. ಆದರೆ ಭಿನ್ನ ಪ್ರಭೇದಗಳಿಗೆ ಸೇರಿರುತ್ತವೆ’ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ತಿಳಿಸಿದರು.
ಇಂದು ಕೊನೆಯ ದಿನ: ಬಂಡೀಪುರ ಅರಣ್ಯದಲ್ಲಿ ನಡೆಯುತ್ತಿರುವ ಪಕ್ಷಿ ಸಮೀಕ್ಷೆ ಭಾನುವಾರ ಕೊನೆಗೊಂಡಿತು. ಪಕ್ಷಿಗಳ ಗಣತಿಯಲ್ಲಿ ಭಾಗವಹಸಿದ ಎಲ್ಲರಿಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಅಭಿನಂದನಾ ಪತ್ರ ವಿತರಿಸಿದರು.