ವಿದ್ಯುತ್ ಉತ್ಪಾದಿಸುವ ಗರಿಯೋಜನೆ ಸ್ಥಗಿತ: ಕೋಟಾ ಶ್ರೀನಿವಾಸ ಪೂಜಾರಿ

Update: 2021-02-08 13:59 GMT

ಬೆಂಗಳೂರು, ಫೆ.8: ರಾಜ್ಯ ಸರಕಾರವು ಕೃಷಿ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದಿಸುವ ಗರಿಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ವಿಧಾನ ಪರಿಷತ್ ಸಭಾ ನಾಯಕರೂ ಆದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ವಿಧಾನ ಪರಿಷತ್‍ನಲ್ಲಿ ಜೆಡಿಎಸ್ ಸದಸ್ಯ ರಮೇಶ್‍ಗೌಡ ಅವರ ತಡೆ ಹಿಡಿಯಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು ಖಾಸಗಿ ಸಂಸ್ಥೆಗಳ ಜೊತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಭತ್ತ, ತೆಂಗಿನಗರಿ ಹಾಗೂ ಇತರ ಕೃಷಿ ತ್ಯಾಜ್ಯಗಳನ್ನು ಸುಟ್ಟು ವಿದ್ಯುತ್ ಉತ್ಪಾದಿಸುವ ಗರಿಯೋಜನೆಯನ್ನು 2001ರಲ್ಲಿ ಆರಂಭಿಸಲಾಗಿತ್ತು. ಪ್ರಾರಂಭದಲ್ಲಿ ಮಧುಗಿರಿ, ಕೊರಟಗೆರೆ, ಶಿವನಾಯಕನ ಪಾಳ್ಯದಲ್ಲಿ 39.46 ಲಕ್ಷ ರೂಪಾಯಿ ವೆಚ್ಚದಲ್ಲಿ ಮೂರು ಘಟಕಗಳನ್ನು ಆರಂಭಿಸಲಾಗಿತ್ತು ಎಂದು ವಿವರಿಸಿದರು.

ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆಗೆ 8.50 ರೂಪಾಯಿ ವೆಚ್ಚವಾಗುತ್ತಿತ್ತು. ಬೆಸ್ಕಾಂ 2.85 ರೂಪಾಯಿಗೆ ಖರೀದಿ ಮಾಡುತ್ತಿತ್ತು. ಉತ್ಪಾದನಾ ವೆಚ್ಚಕ್ಕಿಂತಲೂ ಖರೀದಿ ವೆಚ್ಚ ಕಡಿಮೆ ಇತ್ತು. ಹಾಗಾಗಿ 2015ರಲ್ಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೂ ಮೊದಲು 2014ರಲ್ಲಿ ಗರಿಯೋಜನೆಯನ್ನು ಜೈವಿಕ ಇಂಧನ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಮೇಶ್‍ಗೌಡ, ಲಿಖಿತ ಉತ್ತರದಲ್ಲಿ ಯೋಜನೆಯನ್ನು 2012ರಲ್ಲೇ ನಿಲ್ಲಿಸಿರುವುದಾಗಿ ಹೇಳಲಾಗಿದೆ. ಸಚಿವರು ಮೌಖಿಕ ಉತ್ತರದಲ್ಲಿ 2014ರಲ್ಲಿ ಯೋಜನೆಯನ್ನು ಜೈವಿಕ ಸಂಸ್ಥೆಗೆ ವರ್ಗಾವಣೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ತಪ್ಪು ಉತ್ತರ ಕೊಟ್ಟ ಅಧಿಕಾರಿಗಳ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಸಮಿತಿಯಿಂದ ತನಿಖೆ ನಡೆಸುವಂತೆ ಪಟ್ಟುಹಿಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಚಿವರು, ಯೋಜನೆಯಲ್ಲಿ ಉತ್ಪಾದನಾ ವೆಚ್ಚ ದುಬಾರಿಯಾಗಿರುವುದರಿಂದ ಅದನ್ನು ಮುಂದುವರೆಸುವ ಪ್ರಸ್ತಾವನೆ ಇಲ್ಲ. ಉತ್ತರದಲ್ಲಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವುದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News