ವಿಧಾನಪರಿಷತ್ತಿನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ

Update: 2021-02-08 15:54 GMT

ಬೆಂಗಳೂರು, ಫೆ. 8: ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ತೀವ್ರ ವಿರೋಧದ ಮಧ್ಯೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020(ಗೋಹತ್ಯೆ ನಿಷೇಧ ಮಸೂದೆ)ಕ್ಕೆ ವಿಧಾನ ಪರಿಷತ್‍ನಲ್ಲಿ ಧ್ವನಿಮತ ಅಂಗೀಕಾರ ನೀಡಲಾಗಿದೆ.

ನೂತನ ಸಭಾಪತಿ ಆಯ್ಕೆಗೆ ನಾಳೆ(ಫೆ. 9) ಚುನಾವಣೆ ನಿಗದಿಯಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರನ್ನು ಕಣಕ್ಕಿಳಿಸಲಾಗಿದೆ. 

ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ಮಸೂದೆ ಮಂಡಿಸಿ, ಮಸೂದೆ ಮಂಡನೆ ಅನಿವಾರ್ಯತೆಯನ್ನು ಪ್ರತಿಪಾದಿಸಿ, ಅನುಮೋದನೆ ನೀಡಬೇಕು ಎಂದು ಸದನವನ್ನು ಕೋರಿದರು. ಮಸೂದೆ ಕುರಿತು ವಿವರಣೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಜಾನುವಾರುಗಳ ಹತ್ಯೆ ತಡೆಗಟ್ಟುವುದು ಅನಿವಾರ್ಯ, 1964ರ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಹೊಸ ವಿಧೇಯಕವನ್ನು ತರಲಾಗಿದೆ ಎಂದರು.

ರಾಜ್ಯದಲ್ಲಿ ಪಶು ಸಂಪತ್ತು ನಶಿಸಿ ಹೋಗುತ್ತಿರುವುದರಿಂದ ಗೋವುಗಳನ್ನು ಸಂರಕ್ಷಿಸಲು ಈ ವಿಧೇಯಕ ಜಾರಿಗೆ ಸರಕಾರ ಮುಂದಾಗಿದೆ. ಏಳೆಂಟು ವರ್ಷಗಳಷ್ಟು ಬದುಕುವ ಕುರಿ, ಮೇಕೆ ಹತ್ಯೆಗೆ ಯಾವುದೇ ನಿರ್ಬಂಧವಿಲ್ಲ. ಆದರೆ, ದೀರ್ಘ ಅವಧಿ ಬದುಕುವ ಗೋವು, ಎಮ್ಮೆ, ಎತ್ತುಗಳ ಹತ್ಯೆಗೆ ನಿಷೇಧ ಹೇರಲು ಸರಕಾರ ಉದ್ದೇಶಿಸಿದೆ ಎಂದರು.

ದೇಶದ ಹದಿನಾಲ್ಕು ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಸ್ವಯಂ ಸೇವಾ ಸಂಸ್ಥೆಗಳು ಗೋಶಾಲೆಗಳನ್ನು ನಡೆಸುತ್ತಿದ್ದು, ರಕ್ಷಣೆ ಮಾಡಿರುವ ಜಾನುವಾರುಗಳನ್ನು ಅಲ್ಲಿ ಇರಿಸಲಾಗುತ್ತಿದೆ. ಹೀಗಾಗಿ ಕಾನೂನು ಜಾರಿಗೆ ಬಂದರೆ ಜಾನುವಾರುಗಳಿಗೆ ರಕ್ಷಣೆ ಸಾಧ್ಯವಾಗಲಿದೆ ಎಂದು ಅವರು, ಮಸೂದೆ ಅಂಗೀಕಾರಕ್ಕೆ ಸದನದ ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ಸಿ.ಎಂ.ಇಬ್ರಾಹೀಂ, ನಸೀರ್ ಅಹ್ಮದ್, ನಾರಾಯಣಸ್ವಾಮಿ, ಬಿ.ಕೆ.ಹರಿಪ್ರಸಾದ್, ಜೆಡಿಎಸ್‍ನ ಶ್ರೀಕಂಠೇಗೌಡ, ಅಪ್ಪಾಜಿಗೌಡ ಸೇರಿದಂತೆ ಇನ್ನಿತರ ಸದಸ್ಯರು, ರಾಜ್ಯ ಸರಕಾರ ತರಾತುರಿಯಲ್ಲಿ ವಿಧೇಯಕ ಮಂಡನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಜಾನುವಾರು ಸಂರಕ್ಷಣೆ ಮಾಡಲು ಕಳಕಳಿ ಇಲ್ಲ. ಇವರಿಗೆ ಸ್ವಯಂ ಸಂಸ್ಥೆಗಳನ್ನು ಆಧರಿಸಿ ಗೋ ಸಂರಕ್ಷಣೆ ಸಾಧ್ಯವಿಲ್ಲ. ಪ್ರತಿನಿತ್ಯ ಎಷ್ಟು ಹಸುವಿನ ಕರುಗಳು ಜನಿಸುತ್ತವೆ ಎಂಬ ಮಾಹಿತಿ ನಿಮ್ಮ ಬಳಿ ಇದೇಯೇ? ಸ್ವದೇಶಿ ತಳಿಗಳನ್ನು ಸಂರಕ್ಷಣೆ ಮಾಡಬೇಕು. ಆದರೆ, ಜರ್ಸಿ ಹಸುಗಳು ಗಂಡು ಕರು ಹಾಕಿದರೆ ಏನು ಮಾಡಬೇಕು. ವಯಸ್ಸಾದ ಹಸುಗಳನ್ನು ಸರಕಾರ ಖರೀದಿ ಮಾಡಬೇಕು ಎಂದು ಸಿ.ಎಂ. ಇಬ್ರಾಹೀಂ ಆಗ್ರಹಿಸಿದರು.

ಈ ಮಧ್ಯೆ ಮಸೂದೆ ಮಂಡನೆಯನ್ನು ವಿರೋಧಿಸಿ ಕಾಂಗ್ರೆಸ್-ಜೆಡಿಎಸ್ ಪಕ್ಷದ ಸದಸ್ಯರು ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ಈ ಮಧ್ಯೆಯೇ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ವಿಧೇಯಕವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಸಭಾಪತಿ ಪೀಠದಲ್ಲಿದ್ದ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಅವರು, ವಿಧೇಯಕವನ್ನು ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರೆಯಿತು.

‘ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ವಿಧೇಯಕ 2020 ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಆಗಿರುವುದು ಸಂತಸ ತಂದಿದೆ ಹಾಗೂ ಗೋಹತ್ಯೆ ನಿಷೇಧಕ್ಕೆ ಸಹಾಯ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ. ಕರುನಾಡಿನಲ್ಲಿ ಗೋಹತ್ಯೆ ನಿಷೇಧದ ಬಹುದಿನದ ಕನಸು ನನಸಾಗಿದೆ.’
ಪ್ರಭು ಚವ್ಹಾಣ್, ಪಶುಸಂಗೋಪನೆ ಸಚಿವ

'ಸರಿಯಾದ ವಿಧೇಯಕ ಅಲ್ಲ'
‘ಗೋ ಹತ್ಯೆ ನಿಷೇಧ ಬಿಲ್ ಮುಟ್ಟಿದರೇ ಕರೆಂಟ್ ಹೊಡೆಯೋ ಹಾಗಿದೆ. ಗೋವಿನ ಬಗ್ಗೆ ನಮಗೆ ಪ್ರೇಮ ಇದೆ. ನಾವು ಶಿವನ ಆರಾಧಕರು. ಹಾಲು ಹಾಕಿಕೊಂಡು ನಾವು ಜೀವನ ಮಾಡಿದ್ದೇವೆ. ಆದರೆ, ವಾಸ್ತವವಾಗಿ ಇದು ಸರಿಯಾದ ವಿಧೇಯಕ ಅಲ್ಲ.’
ಬಿ.ಕೆ.ರವಿ, ಕಾಂಗ್ರೆಸ್ ಸದಸ್ಯ 


'ಅಜೆಂಡಾ ಪ್ರಕಾರ ಕಾಯ್ದೆ ಜಾರಿ'
‘ಅಜೆಂಡಾ ಪ್ರಕಾರ ಕಾಯ್ದೆ ಪರಿಷತ್‍ನಲ್ಲಿ ಸೋಮವಾರ ಅಂಗೀಕಾರ ಆಗಿದೆ. ಕಾಂಗ್ರೆಸ್‍ನವರಿಗೆ ಈ ಕುರಿತು ಚರ್ಚಿಸಲು ಆಸಕ್ತಿ ಇಲ್ಲ. ಅವರು ದನ ಕೊಲ್ಲುವವರು, ನಾವು ದನ ಕಾಯುವವರು. ಸಂವಿಧಾನದ ಆಶಯದಂತೆ ಬಿಲ್ ಪಾಸ್ ಮಾಡಿದ್ದೇವೆ.’
ಬಸವರಾಜ ಬೊಮ್ಮಾಯಿ, ಗೃಹ ಸಚಿವ 

'ಐತಿಹಾಸಿಕ ತೀರ್ಮಾನವಾಗಿದೆ'
‘ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಆಗಿದ್ದರಿಂದ ನಮಗೆ ಖುಷಿಯಾಗಿದೆ. ಇದು ಐತಿಹಾಸಿಕ ತೀರ್ಮಾನವಾಗಿದೆ. ಇಂದು ನಾವು ಪುಣ್ಯರಾಗಿದ್ದೇವೆ. ಗೋವಿನ ಸಂತತಿ ಭಾರತದಲ್ಲಿ ಹೆಚ್ಚಬೇಕೆಂಬ ಮಹಾತ್ಮ ಗಾಂಧೀಜಿಯವರ ಕನಸು ನನಸಾದ ದಿನ ಇವತ್ತು. ಕಾಂಗ್ರೆಸ್‍ನವರು ಬೆಂಬಲಿಸಬೇಕಿತ್ತು ಆದರೆ, ವಿರೋಧಿಸಿದ್ದಾರೆ. ಹಿಂದೆ ಕಾಂಗ್ರೆಸ್ ಪಕ್ಷದವರ ಗುರುತು ಹಸು- ಕರು ಆಗಿತ್ತು. ನಾವು ಅವರ ಕೈಯಿಂದ ಹಸು, ಕರುವನ್ನು ರಕ್ಷಿಸಿದ್ದೇವೆ.’ 
ಆರ್.ಅಶೋಕ್, ಕಂದಾಯ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News