×
Ad

ಚಿಕ್ಕಮಗಳೂರು: ಅತಿವೃಷ್ಟಿ ಪರಿಹಾರಧನ ವಿತರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ರೈತರ ಮನವಿ

Update: 2021-02-08 20:14 IST

ಚಿಕ್ಕಮಗಳೂರು, ಫೆ.8: ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಧಾರಾಕಾರ ಮಳೆಗೆ ನದಿಗಳಲ್ಲಿ ಪ್ರವಾಹ ಉಂಟಾಗಿ ಜಮೀನುಗಳಲ್ಲಿದ್ದ ಬೆಳೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ಸರಕಾರ ಪರಿಹಾರಧನ ಬಿಡುಗಡೆ ಮಾಡುತ್ತಿದ್ದು, ಜಿಲ್ಲೆಯಲ್ಲಿ ಕೆಲವು ರೈತರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಆದ್ದರಿಂದ ನಷ್ಟಕ್ಕೊಳಗಾದ ಎಲ್ಲಾ ಕೃಷಿಕರಿಗೂ ರಾಜ್ಯ ಸರಕಾರ ಘೋಷಿಸಿರುವ ಪರಿಹಾರಧನವನ್ನು ತಕ್ಷಣ ವಿತರಿಸಬೇಕೆಂದು ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಪಂ ವ್ಯಾಪ್ತಿಯ ರೈತರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಮತ್ತು ಬಿಎಸ್ಪಿ ಜಿಲ್ಲಾ ಸಂಯೋಜಕ ಮರಗುಂದ ಪ್ರಸನ್ನ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಸೋಮವಾರ ಭೇಟಿ ಮಾಡಿದ ರೈತರು ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ಎಲ್ಲ ರೈತರಿಗೆ ಸಮರ್ಪಕವಾಗಿ ಸರಕಾರದ ಪರಿಹಾರಧನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

ಕಳೆದ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ  ಸುರಿದ ಭಾರೀ ಮಳೆ, ಗಾಳಿ ಮತ್ತು ಪ್ರವಾಹದಿಂದಾಗಿ ಊರುಬಗೆ ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ರೈತರು ಬೆಳೆದಿದ್ದ ಕಾಫಿ, ಮೆಣಸು, ಏಲಕ್ಕಿ, ಭತ್ತ, ಬಾಳೆ, ಅಡಿಕೆ ಮತ್ತಿತರ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಪರಿಣಾಮ ರೈತರು ಬೆಳೆಯೂ ಇಲ್ಲದೇ ಪರಿಹಾರವೂ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆ, ಪ್ರವಾಹದಿಂದಾಗಿ ಕೃಷಿ ಭೂಮಿ ನಾಶವಾಗಿದ್ದು, ಮತ್ತೆ ಕೃಷಿ ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡ ರೈತರು, ರಾಜ್ಯ ಸರಕಾರ ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ಘೋಷಿಸಿರುವ ಪರಿಹಾರ ಧನ ನೆರೆಯ ಹಾಸನ ಜಿಲ್ಲೆಯಲ್ಲಿ ಎಲ್ಲ ರೈತರಿಗೆ ಸಿಕ್ಕಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಪರಿಹಾರಧನ ಇನ್ನೂ ಸಿಕ್ಕಿಲ್ಲ ಎಂದು ಆರೋಪಿಸಿದರು.

ಅತಿವೃಷ್ಟಿಯಾಗಿ 6 ತಿಂಗಳು ಕಳೆದರೂ ಇನ್ನೂ ಊರುಬಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳೆ ನಷ್ಟ ಅನುಭವಿಸಿರುವ ಎಲ್ಲಾ ರೈತರಿಗೂ ಪರಿಹಾರ ಧನ ನೀಡಿಲ್ಲ. ಬೆರಳೆಣಿಕೆಯಷ್ಟು ಕೃಷಿಕರಿಗೆ ಮಾತ್ರ ಪರಿಹಾರ ಧನ ನೀಡಲಾಗಿದೆ, ಅದರಲ್ಲೂ ಕೆಲವರಿಗೆ 800, 2000, 3000 ರೂ. ನಂತೆ ಕಡಿಮೆ ಮೊತ್ತದ ಪರಿಹಾರಧನವನ್ನು ಅವೈಜ್ಞಾನಿಕವಾಗಿ ವಿತರಿಸಲಾಗಿದೆ ಎಂದು ಆರೋಪಿಸಿದ ರೈತರು, ಜಿಲ್ಲಾಡಳಿತ ಈ  ತಾರತಮ್ಯ ನೀತಿಯನ್ನು ಕೈ ಬಿಡಬೇಕು. ರಾಜ್ಯ ಸರಕಾರ ನಿಗಧಿಪಡಿಸಿರುವಂತೆ ಬೆಳೆ ನಷ್ಟ ಅನುಭವಿಸಿರುವ ಎಲ್ಲಾ ರೈತರಿಗೂ ಪ್ರತೀ ಎಕರೆಗೆ 7 ಸಾವಿರ ರೂ. ನಂತೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ರೈತರಾದ ವಾಸುದೇವ್, ಸಂದೀಪ್, ನಿಶಾಂತ್ ಪಟೇಲ್, ಸುಬ್ರಾಯ, ಜಯಣ್ಣ, ಚೇತನ್, ಎಸ್.ಬಿ.ಮೋಹನ್ ಕುಮರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News