ವಂಚಕ ಪ್ರಕರಣ: ಯುವರಾಜ್ ಸ್ವಾಮಿಗೆ ಜಾಮೀನು ನೀಡಲು ಕೋರ್ಟ್ ನಕಾರ

Update: 2021-02-08 15:50 GMT

ಬೆಂಗಳೂರು, ಫೆ.8: ಕೆಎಸ್ಸಾರ್ಟಿಸಿ ನಿಗಮ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಯುವರಾಜ್ ಸ್ವಾಮಿಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಆರೋಪಿ ಯುವರಾಜ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 67ನೆ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ನ್ಯಾಯಪೀಠ, ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಪ್ರಕಟಿಸಿದರು. ಆರೋಪಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು. 

ಬಿಜೆಪಿ ನಾಯಕರೊಂದಿಗೆ ತನಗೆ ನಿಕಟ ಸಂಪರ್ಕವಿದ್ದು ನಿಮಗೆ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿ ಸುರೇಂದ್ರ ರೆಡ್ಡಿ ಎಂಬುವರಿಂದ ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಿದ್ದ ಆರೋಪದಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದು ಆರೋಪಿ ಯುವರಾಜ್ ವಿರುದ್ಧ ದಾಖಲಿಸಿಕೊಂಡಿರುವ ಮೊದಲ ಪ್ರಕರಣವಾಗಿದ್ದು, ನ್ಯಾಯಾಲಯ ಜಾಮೀನು ನಿರಾಕರಿಸಿರುವುದು ಗಮನಾರ್ಹ.

ಆರೋಪಿ ಸ್ವಾಮಿ ರಾಜ್ಯಪಾಲರ ಹುದ್ದೆ, ಸರಕಾರಿ ನೌಕರಿ, ಮೆಡಿಕಲ್ ಸೀಟ್, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾನೆ ಎಂದು ಸಿಸಿಬಿ ಪೊಲೀಸರು ಆರೋಪಿಸಿದ್ದಾರೆ. ಹಾಗೆಯೇ, ಈತನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸೇರಿ ಒಟ್ಟು  14 ಪೊಲೀಸ್ ಠಾಣೆಗಳಲ್ಲಿ  ಪ್ರಕರಣಗಳು ದಾಖಲಾಗಿವೆ. ಆರೋಪ ಸಂಬಂಧ ಸಿಸಿಬಿ ಪೊಲೀಸರು ಆರೋಪಿ ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News