×
Ad

ಮೀರಾ ರಾಘವೇಂದ್ರ ವಿರುದ್ಧ ಕ್ರಮಕ್ಕೆ ಆಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಆಗ್ರಹ

Update: 2021-02-08 22:41 IST

ಬೆಂಗಳೂರು, ಫೆ.8: ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಮ್ಮ ಕೇಸಿನ ವಿಚಾರಣೆಗೆ ಫೆ.4ರಂದು ಹಾಜರಾಗಿದ್ದ ಹಿರಿಯ ಸಾಹಿತಿ ಪ್ರೊ.ಕೆ.ಎಸ್ ಭಗವಾನ್‍ರವರ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಎನ್ನುವವರು ಮಸಿ ಬಳಿದು ಅವರನ್ನು ಅವಮಾನ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಆಲ್ ಇಂಡಿಯಾ ಲಾಯರ್ಸ್ ಕೌನ್ಸಿಲ್ ಅಧ್ಯಕ್ಷ ಅಡ್ವೊಕೇಟ್ ಪ್ರೊ.ಹರಿರಾಮ್ ಹೇಳಿದ್ದಾರೆ.

ಈ ಸಂಬಂಧ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಪತ್ರ ಬರದಿರುವ ಅವರು, ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ವಾಕ್ ಸ್ವಾತಂತ್ರ್ಯವನ್ನು ನೀಡಿದ್ದು, ತಮಗಿಷ್ಟವಿಲ್ಲದ್ದನ್ನು ಖಂಡಿಸುವುದು ಇಷ್ಟವಾದದನ್ನು ಸ್ವೀಕರಿಸುವುದು ಅವರ ಅಭಿಪ್ರಾಯಕ್ಕೆ ಬಿಟ್ಟ ವಿಷಯ. ಆದರೆ ಅವರು ನಾಸ್ತಿಕರು ಎನ್ನುವ ಕಾರಣಕ್ಕೆ ಅವರ ಮೇಲೆ ಈ ರೀತಿಯ ದೌರ್ಜನ್ಯ ನಡೆಸುವುದು ನಿಜಕ್ಕೂ ಖಂಡನೀಯ ಎಂದು ತಿಳಿಸಿದ್ದಾರೆ.

ವಕೀಲೆ ಮೀರಾ ರಾಘವೇಂದ್ರ, ಪ್ರೊ.ಭಗವಾನ್‍ರವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಅದೇ ಕೇಸಿನಲ್ಲಿ ಜಾಮೀನು ಪಡೆಯಲು ಭಗವಾನ್ ನ್ಯಾಯಾಲಯಕ್ಕೆ ಬಂದಂತಹ ಸಂದರ್ಭದಲ್ಲಿ ಏಕಾಏಕಿ ಅವರಿಗೆ ಮಸಿ ಬಳಿದು ಅವರನ್ನು ನಿಂದಿಸಿ ಅವಮಾನಿಸಿರುವ ಘಟನೆಯು ಅಮಾನವೀಯ ಹಾಗೂ ಕಾನೂನು ಬಾಹಿರ ಎಂದು ಅವರು ಹೇಳಿದ್ದಾರೆ.

ವಕೀಲೆ ಮೀರಾ ರಾಘವೇಂದ್ರರವರು ಭಗವಾನ್ ವಿರುದ್ಧ ಪ್ರಕರಣವನ್ನು ದಾಖಲಿಸಿ ಆ ಪ್ರಕರಣದಲ್ಲಿ ದೂರುದಾರರಾಗಿದ್ದು, ಈ ಸಂದರ್ಭದಲ್ಲಿ ದೂರುದಾರರು ಅದರಲ್ಲೂ ವಕೀಲೆಯೆ ಆರೋಪಿಯ ಮೇಲೆ ದಾಳಿ ಮಾಡಿ ಉದ್ದೇಶಪೂರ್ವಕವಾಗಿ ಅವರನ್ನು ಅವಮಾನ ಮಾಡುವುದು ಸರಿಯೇ? ಇದು ವಕೀಲರ ಅಧಿನಿಯಮ 1961 ನಿಯಮಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಭಗವಾನ್‍ರವರ ಮಾತಿನಿಂದ ಅವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದ್ದರೆ ಅವರು ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯವನ್ನು ಪಡೆದುಕೊಳ್ಳುವ ಹಕ್ಕು ಹೊಂದಿದ್ದಾರೆ. ಆದರೆ ಈ ರೀತಿಯ ದುಂಡಾವರ್ತನೆಯನ್ನು ಮಾಡುವುದು ಅಥವಾ ಅವರೇ ಶಿಕ್ಷಿಸುವ ಹಕ್ಕು ಯಾವ ಕಾನೂನು ಕೂಡ ಅವರಿಗೆ ನೀಡುವುದಿಲ್ಲ ಎಂದು ಹರಿರಾಮ್ ತಿಳಿಸಿದ್ದಾರೆ. 

ವಕೀಲೆಯ ಈ ಕೃತ್ಯ ಇಡೀ ವಕೀಲ ಸಮುದಾಯವನ್ನೆ ತಲೆತಗ್ಗಿಸುವಂತೆ ಮಾಡಿದ್ದು, ನ್ಯಾಯಾಲಯ ಮೇಲೆ ನಂಬಿಕೆ ಇಲ್ಲದೆ ತಾವೆ ನ್ಯಾಯವನ್ನು ಕೈಗೆ ತೆಗೆದುಕೊಳ್ಳುವವರು ವಕೀಲ ವೃತ್ತಿಯಲ್ಲಿ ಮುಂದುವರಿಯಲು ಅರ್ಹರಲ್ಲ. ಇವರ ಈ ಕೃತ್ಯ ವಕೀಲ ವೃತ್ತಿಗೆ ಮತ್ತು ಗೌರವಕ್ಕೆ ಕಳಂಕ ತರುವಂತಿದೆ. ಆದುದರಿಂದ ಈ ಕೂಡಲೇ ವಕೀಲರ ಪರಿಷತ್ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News