×
Ad

ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

Update: 2021-02-08 23:02 IST

ಶಿವಮೊಗ್ಗ: ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗಾಣಿಗ ಹೋರಾಟ ಸಮಿತಿ ಅಧ್ಯಕ್ಷ ಗುರಣ್ಣ ಜಿ.ಗೋಡಿ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ೨೦೧೮-೧೯ ಮತ್ತು ೧೯-೨೦ನೇ ಸಾಲಿನ ವಾರ್ಷಿಕ ಮತ್ತು ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ ಗಾಣಿಗ ಸಮಾಜದವರು 64 ಲಕ್ಷ ಜನರಿದ್ದು, ಸಾಕಷ್ಟು ಜನರು ಆರ್ಥಿಕವಾಗಿ ತೀರ ಹಿಂದುಳಿದಿದ್ದು, ತುಂಬಾ ಸಂಕಷ್ಟದಲ್ಲಿರುವ ಜನರ ಅಭಿವೃದ್ಧಿಗಾಗಿ ತುಂಬಾ ಅಗತ್ಯವಾಗಿ ರಾಜ್ಯದಲ್ಲಿ ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ತಿಳಿಸಿದರು.

ಗಾಣಿಗ ಸಮಾಜದ ಎಲ್ಲರೂ ಒಗ್ಗಟ್ಟಾಗಬೇಕು. ಉತ್ತರಕರ್ನಾಟಕ ಹಾಗೂ ದಕ್ಷಿಣಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಗಾಣಿಗ ಸಮಾಜದ ಜನರು ಒಟ್ಟಾಗಿ ಸಂಘಟನೆ ಬಲಿಷ್ಠಗೊಳಿಸಬೇಕು. ಲಿಂಗಾಯತ ವೀರಶೈವ ಗಾಣಿಗ ಜನಾಂಗಕ್ಕೆ ೨ಎ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಈಗಾಗಲೇ ರಾಜ್ಯ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೇವೆ. ನಿಗಮ ಸ್ಥಾಪನೆಯಾದಲ್ಲಿ ಸಮಾಜದ ಅಭಿವೃದ್ಧಿ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿಗಾಣಿಗ ಹೋರಾಟ ಸಮಿತಿಯಿಂದಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡುವ ಮೂಲಕ ಸಮಾಜವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದೇವೆ. ಶಿವಮೊಗ್ಗದಲ್ಲಿಯೂ ಉತ್ತಮವಾಗಿ ಸಂಘಟನೆ ಬೆಳೆಯುವ ದೃಷ್ಠಿಯಿಂದ ಹಿರಿಯರು ಎಲ್ಲರೂ ಒಟ್ಟಾಗಿ ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.

ಭದ್ರಾವತಿ ನಗರಸಭೆ ಮಾಜಿಅಧ್ಯಕ್ಷ ಬಿ.ಕೆ.ಮೋಹನ್ ಮಾತನಾಡಿ, ಗಾಣಿಗ ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತ ಸಾಧಕರಿದ್ದು, ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು.ಎಲ್ಲ ವೀರಶೈವ ಲಿಂಗಾಯತ ಗಾಣಿಗರು ಒಂದಾಗಬೇಕು. ಸೂಡಾದಿಂದ ಸಂಘಕ್ಕೆ ನಿವೇಶನ ಒದಗಿಸಬೇಕು ಎಂದು ಮನವಿ ಮಾಡಿದರು. ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಾತನಾಡಿ, ಪರಿಶೀಲಿಸಿ ನೀಡುವುದಾಗಿ ಭರವಸೆ ನೀಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವಿಶೇಷ ಸಾಧನೆಗೈದ ಸಮಾಜದ ಜನರಿಗೆ ಅಭಿನಂದಿಸಲಾಯಿತು. ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯ್‌ ಕುಮಾರ್ ‌ಅಧ್ಯಕ್ಷತೆ ವಹಿಸಿದ್ದರು.

ಡಿಸಿಸಿ ಬ್ಯಾಂಕ್ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಕರ್ನಾಟಕ ವಿಶ್ವವಿದ್ಯಾಲಯದ ಡಾ. ಟಿ.ಸಿ.ತಾರಾನಾಥ್, ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ಕೆ.ವಿ.ಸಜ್ಜನ್‌ ಶೆಟ್ಟರ್, ಲೆಕ್ಕ ಪರಿಶೋಧಕ ಜೆ.ಎಂ.ನಾಗರಾಜ್, ಶಿಕಾರಿಪುರದ ಸಮಾಜ ಸೇವಕಿ ರೇಖಾರಾಜಶೇಖರ್, ಉದ್ಯಮಿಜಗನ್ನಾಥ್, ಸಂಘದ ಉಪಾಧ್ಯಕ್ಷ ಎನ್.ಬಿ.ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎ.ಅಶೋಕ್, ಕಾರ್ಯದರ್ಶಿ ಕಿರಣ್‌ಕುಮಾರ್ ‌ಎಂ.ಆರ್., ಸಂಘಟನಾ ಕಾರ್ಯದರ್ಶಿ ಇಂದೂಧರ ಟಿ., ಸಂಚಾಲಕ ಡಾ. ಆರ್.ಬಿ.ಕಲಿವಾಳ, ಖಜಾಂಚಿ ಎ.ಎಸ್.ರವಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News