ಹಣದುಬ್ಬರದ ಮೂಲ ತೈಲಬೆಲೆ ಏರಿಕೆ

Update: 2021-02-09 10:24 GMT

ಹಣದುಬ್ಬರದ ಪ್ರಮಾಣವನ್ನು ನಿಯಂತ್ರಿಸಬೇಕೆಂದು ಕೇಂದ್ರ ಸರಕಾರ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಪದೇ ಪದೇ ಸೂಚನೆ ನೀಡುತ್ತಲೇ ಇದೆ. ಆದರೆ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಲೇ ಇಲ್ಲ. ಚಿಲ್ಲರೆ ಹಣದುಬ್ಬರದ ಪ್ರಮಾಣ ಶೇಕಡಾ 4ರಷ್ಟಿರಬೇಕೆಂಬುದು ಕೇಂದ್ರದ ಇಂಗಿತ. ಆದರೆ 2020ರಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣ ಗರಿಷ್ಠ ಮಿತಿಯಾದ ಶೇಕಡಾ 6ನ್ನು ದಾಟಿದೆ.ಇದಕ್ಕಾಗಿ ಗ್ರಾಹಕ ದರ ಸೂಚ್ಯಂಕ ಮರು ಹೊಂದಾಣಿಕೆ ಮಾಡಲೂ ಕೇಂದ್ರ ಸರಕಾರ ಯೋಚಿಸುತ್ತಿದೆ. ಹಣದುಬ್ಬರದಲ್ಲಿ ಆಹಾರ ಉತ್ಪನ್ನಗಳ ಪಾಲು ಅರ್ಧದಷ್ಟಿರುವುದು ನಿಜವಾಗಿರಬಹುದು. ಆದರೆ ವಾಸ್ತವವಾಗಿ ಹಣದುಬ್ಬರದ ಮೂಲ ಕಾರಣ ತೈಲೋತ್ಪನ್ನಗಳ ಬೆಲೆ ಏರಿಕೆಯಾಗಿದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿ ತರಬೇಕೆಂದರೆ ಎಲ್ಲಕ್ಕಿಂತ ಮೊದಲು ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಿಸಬೇಕು. ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗೂ ನಿಕಟ ಸಂಬಂಧವಿರುತ್ತದೆ. ಪೆಟ್ರೋಲ್, ಡೀಸೆಲ್ ಮತ್ತು ಇತರ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾದರೆ ಸಹಜವಾಗಿ ಜೀವನಾವಶ್ಯಕ ವಸ್ತುಗಳ ಬೆಲೆಯಲ್ಲಿ ಏರುಪೇರಾಗುತ್ತದೆ. ತೈಲೋತ್ಪನ್ನಗಳ ಬೆಲೆ ನಿಯಂತ್ರಿಸದೆ ಹಣದುಬ್ಬರದ ಪ್ರಮಾಣ ಕಡಿಮೆ ಮಾಡಲು ಸಾಧ್ಯವಿಲ್ಲ.

ಏಳು ವರ್ಷಗಳ ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕೇಂದ್ರದಲ್ಲಿದ್ದಾಗ ಒಂದು ಲೀಟರ್ ಪೆಟ್ರೋಲ್ ಬೆಲೆ ಅರವತ್ತು ರೂಪಾಯಿಗೆ ಹೆಚ್ಚಾದಾಗ, ಅಡಿಗೆ ಅನಿಲ ಸಿಲಿಂಡರ್ ಬೆಲೆ 300 ರೂ. ಇದ್ದುದು 350 ರೂ. ಆದಾಗ ದೊಡ್ಡ ಕೋಲಾಹಲವೇ ಆಗಿತ್ತು. ಡೀಸೆಲ್ ಬೆಲೆ 10 ರೂಪಾಯಿ ಜಾಸ್ತಿಯಾದರೆ ನಮ್ಮ ಮೇಲ್ಮಧ್ಯಮ ವರ್ಗದ ಮೋದಿಪ್ರಿಯ ಜನ ಬೀದಿಗೆ ಬರುತ್ತಿದ್ದರು. ಮನೆಯಲ್ಲಿ ಗೊಣಗಾಡುತ್ತಿದ್ದರು. ಆದರೆ ಈಗ ಪೆಟ್ರೋಲ್ ದರ 100 ರೂ. ಗಡಿಯನ್ನು ತಲುಪಿದೆ. ಡೀಸೆಲ್ ದರ ಅದರ ಬೆನ್ನ ಹಿಂದೆಯೇ ಓಡುತ್ತಿದೆ.ಇನ್ನು ಅಡಿಗೆ ಅನಿಲ ಸಿಲಿಂಡರ್ ದರ 800 ರೂ. ತಲುಪಿದೆ. ಅಡಿಗೆ ಅನಿಲಕ್ಕೆ ಸರಕಾರ ಕೊಡುತ್ತಿದ್ದ ಸಬ್ಸಿಡಿಯನ್ನು ಹೇಳದೆ ಕೇಳದೆ, ಸದ್ದು ಗದ್ದಲವಿಲ್ಲದೆ ಸ್ಥಗಿತಗೊಳಿಸಿ ಆರು ತಿಂಗಳು ದಾಟಿತು. ನಮ್ಮ ಮೋದಿಪ್ರಿಯ ಜನರೂ ಇದು ಸಹಜ ಎಂದು ಒಪ್ಪಿಕೊಂಡಾಗಿದೆ. ಪ್ರತಿಪಕ್ಷಗಳೂ ನಿರ್ಲಿಪ್ತವಾಗಿವೆ. ವಾಸ್ತವ ಹೀಗಿರುವಾಗ ರಿಸರ್ವ್ ಬ್ಯಾಂಕ್‌ಗೆ ಸೂಚನೆ ನೀಡಿ ಹಣದುಬ್ಬರದ ಪ್ರಮಾಣ ಕಡಿಮೆ ಮಾಡಲು ಹೇಗೆ ಸಾಧ್ಯ?

ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೇರವಾಗಿ ನಿಯಂತ್ರಿಸುವುದಿಲ್ಲ ಎಂಬುದೇನೋ ನಿಜ. ಈ ಎರಡು ಇಂಧನಗಳ ಬೆಲೆಗಳನ್ನು ನಿಯಂತ್ರಣ ಮುಕ್ತಗೊಳಿಸಲಾಗಿದೆ. ಹಾಗಿದ್ದರೂ ನಿಯಂತ್ರಣ ಮುಕ್ತ ಗೊಳಿಸಿದ ತೈಲೋತ್ಪನ್ನಗಳ ಬೆಲೆಗಳು ದಿಢೀರ್ ಹೆಚ್ಚಳವಾಗುತ್ತವೆ ಏಕೆ? ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದು ಹೋಗಿರುವಾಗಲೂ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಅದಕ್ಕೆ ಪೂರಕವಾಗಿ ಇರಬೇಕಾಗಿತ್ತಲ್ಲವೇ? ಯಾಕೆ ಪೂರಕವಾಗಿಲ್ಲವೆಂದರೆ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದರೂ ಭಾರತದಲ್ಲಿ ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತೈಲೋತ್ಪನ್ನಗಳ ಮೇಲಿನ ಸುಂಕ, ವ್ಯಾಟ್, ಸೆಸ್ ಇತ್ಯಾದಿಗಳನ್ನು ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ಪೂರಕವಾಗಿ ಕಡಿಮೆ ಮಾಡಿಲ್ಲ. ಹೀಗಾಗಿ ಜನಸಾಮಾನ್ಯರು ಪೆಟ್ರೋಲಿಯಂ ಉತ್ಪನ್ನಗಳಿಗೆ ದುಬಾರಿ ಬೆಲೆಯನ್ನು ತೆರಬೇಕಾಗಿದೆ. ವಾಸ್ತವವಾಗಿ ಲೀಟರ್‌ಗೆ 90 ರೂಪಾಯಿಗೆ ಮಾರಾಟವಾಗುವ ಪೆಟ್ರೋಲ್‌ಗೆ ಅರವತ್ತು ರೂಪಾಯಿವರೆಗೆ ಸುಂಕ, ಸೆಸ್ ಇತ್ಯಾದಿಗಳನ್ನು ಹೇರಲಾಗಿರುವುದೇ ಪೆಟ್ರೋಲಿಯಂ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಿದೆ. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಕುಸಿದಾಗಲೂ ಅದರ ಪ್ರಯೋಜನ ಜನಸಾಮಾನ್ಯರಿಗೆ ಲಭಿಸದಂತಾಗಲು ಸರಕಾರ ಬೇಕಾಬಿಟ್ಟಿಯಾಗಿ ಹೇರುವ ಸುಂಕ ಮತ್ತು ಸೆಸ್‌ಗಳು ಕಾರಣವಾಗಿವೆ. ಇದನ್ನು ಮರೆ ಮಾಚಲು ಜನಸಾಮಾನ್ಯರನ್ನು ಗೋಹತ್ಯೆ ನಿಷೇಧ, ಲವ್ ಜಿಹಾದ್, ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹದಂತಹ ಭಾವನಾತ್ಮಕ ವಿಷಯಗಳಲ್ಲಿ ಮುಳುಗಿಸುವ ಕಲೆ ಈ ಸರಕಾರಕ್ಕೆ ಸಿದ್ಧಿಸಿದೆ.

ಕೋಟಿ ಕೋಟಿ ಲಾಭ ದೋಚುವ ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ಮೇಲೆ ರಿಯಾಯಿತಿ ನೀಡುತ್ತ ಬಂದ ಕೇಂದ್ರದ ಬಿಜೆಪಿ ಸರಕಾರ ಜನಸಾಮಾನ್ಯರ ಬಳಕೆಯ ಪದಾರ್ಥಗಳ ಬೆಲೆ ಏರಿಕೆ ನಿಯಂತ್ರಣದಲ್ಲಿ ವಿಫಲವಾಗಲು ಕಾರಣವೇನು? ಅಡಿಗೆ ಅನಿಲದ ಸಂಪರ್ಕವನ್ನು ಬಡವರಿಗೆ ಉಚಿತವಾಗಿ ನೀಡುವುದಾಗಿ ಪ್ರಚಾರ ಗಿಟ್ಟಿಸಿಕೊಳ್ಳುವ ಸರಕಾರ ಅಡಿಗೆ ಸಿಲಿಂಡರ್ ಬೆಲೆಯನ್ನು ಯಾಕೆ ನಿಯಂತ್ರಿಸುತ್ತಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವನ್ನು ಯಾಕೆ ತಡೆಯುತ್ತಿಲ್ಲ? ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ನಿಯಂತ್ರಣ ಮಾಡದೆ ಹಣದುಬ್ಬರಕ್ಕೆ ಕಡಿವಾಣ ಹಾಕಲು ಹೇಗೆ ಸಾಧ್ಯ? ಇದಕ್ಕೆ ಒಂದೇ ಪರಿಹಾರವೆಂದರೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತರ್ಕರಹಿತವಾದ ಸುಂಕ, ಸೆಸ್ ಮತ್ತು ವ್ಯಾಟ್‌ಗಳನ್ನು ಕಡಿಮೆ ಮಾಡುವುದಾಗಿದೆ. ಇದಕ್ಕೆ ಸರಕಾರ ಕ್ರಮ ಕೈಗೊಂಡರೆ ಮಾತ್ರ ಹಣದುಬ್ಬರದ ನಿಯಂತ್ರಣ ಸಾಧ್ಯವಾಗುತ್ತದೆ.

ಆದರೆ ಕೋವಿಡ್ ನಂತರದ ಪರಿಸ್ಥಿತಿ ಮಾತ್ರವಲ್ಲ, ಮುಂಚಿನ ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕಾರ್ಪೊರೇಟ್ ಹಿತಾಸಕ್ತಿ ರಕ್ಷಿಸುವ ತರ್ಕರಹಿತ ನೀತಿಗಳಿಂದಾಗಿ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಕೇಂದ್ರ ಸರಕಾರ ಅಷ್ಟು ಸುಲಭವಾಗಿ ಸುಂಕದ ಮೂಲಕ ಬರುವ ಆದಾಯವನ್ನು ಬಿಟ್ಟು ಕೊಡುವುದಿಲ್ಲ. ಇದಕ್ಕೆ ಜನರಿಂದ ಒತ್ತಡ ಬರಬೇಕು. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಜನ ಸಾಮಾನ್ಯರು ಪ್ರತಿಭಟನೆ ಮಾಡಿದರೆ ಮಾತ್ರ ಸರಕಾರ ದಾರಿಗೆಬರುತ್ತದೆ.

ಸರಕಾರ ಆರ್ಥಿಕ ಬಿಕ್ಕಟ್ಟಿನಲ್ಲಿ ಇದ್ದರೆ ಕೊರೋನ ಕಾಲದಲ್ಲೂ ಕೋಟಿ ಕೋಟಿ ಲಾಭ ಮಾಡಿಕೊಂಡ ಕಾರ್ಪೊರೇಟ್ ಕಂಪೆನಿಗಳ ಮೇಲೆ ವಿಶೇಷ ಕೊರೋನ ತೆರಿಗೆ ಹೇರಿ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News