ಭಾರತೀಯ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆಯಿದೆ: ರಾಜ್ಯಸಭೆಯಲ್ಲಿ ಗುಲಾಂ ನಬಿ ಆಝಾದ್‌ ವಿದಾಯ ಭಾಷಣ

Update: 2021-02-09 10:55 GMT

ಹೊಸದಿಲ್ಲಿ: "ಭಾರತ ಒಂದು ಸ್ವರ್ಗ ಎಂದು ನನಗೆ ಯಾವತ್ತೂ ಅನಿಸುತ್ತಿತ್ತು.  ನಾನು ಸ್ವಾತಂತ್ರ್ಯಾನಂತರ ಜನಿಸಿದವನು. ಪಾಕಿಸ್ತಾನಕ್ಕೆ ಹೋಗದೇ ಇದ್ದ ಅದೃಷ್ಟವಂತರಲ್ಲಿ   ನಾನೂ ಒಬ್ಬ. ಪಾಕಿಸ್ತಾನದಲ್ಲಿರುವ ಪರಿಸ್ಥಿತಿ ಬಗ್ಗೆ ಓದುವಾಗ, ನನಗೆ ಹಿಂದುಸ್ತಾನಿ ಮುಸ್ಲಿಂ ಎಂದು ಅನಿಸಿಕೊಳ್ಳಲು ಹೆಮ್ಮೆಯಿದೆ" ಎಂದು  ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಇಂದು ರಾಜ್ಯಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಹೇಳಿದರು.

ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಜಮ್ಮು ಕಾಶ್ಮೀರದಲ್ಲಿ  ಸಂಭವಿಸಿದ ಉಗ್ರ ದಾಳಿಯನ್ನು ನೆನಪಿಸಿದ ಅವರು "ಈ ದೇಶದಲ್ಲಿ ತೀವ್ರಗಾಮಿತ್ವ ಹಾಗೂ ಉಗ್ರವಾದ ಅಂತ್ಯಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹೇಳಿದರು.

ಜಗತ್ತಿನ ಇತರೆಡೆಗಳಲ್ಲಿ ಮುಸ್ಲಿಂ ಸಮಾಜದಲ್ಲಿ ಒಳಜಗಳಗಳು ತುಂಬಿದ್ದರೆ ಅದಕ್ಕೆ ತದ್ವಿರುದ್ಧವೆಂಬಂತೆ ಭಾರತೀಯ ಮುಸ್ಲಿಮರು ಜತೆಯಾಗಿ ವಾಸಿಸುತ್ತಿದ್ದಾರೆ ಹಾಗೂ ಹಾಗೆಯೇ ಮುಂದುವರಿಯಬೇಕು" ಎಂದು ಆಝಾದ್ ಹೇಳಿದರು.

ರಾಜ್ಯಸಭೆಯಲ್ಲಿ ತಮ್ಮ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತವರ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸಿ ಆಝಾದ್ ತಮ್ಮ ಭಾಷಣ ಆರಂಭಿಸಿದರು.

"ಈ ಸಂಸತ್ತಿನಿಂದ ನಾನು ಬಹಳಷ್ಟು ಕಲಿತಿದ್ದೇನೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವಧಿಯಲ್ಲಿ ನನ್ನನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿತ್ತು. ತಾವು ಬಿಜೆಪಿ ಜತೆಯಲ್ಲ,  ಅಟಲ್ ಜಿ ಜತೆ ಸಂಪರ್ಕದಲ್ಲಿರುವುದಾಗಿ ಇಂದಿರಾ ಜೀ ಹೇಳುತ್ತಿದ್ದುದನ್ನು ನಾನು ಮರೆಯಲಾರೆ" ಎಂದು ಹೇಳಿದ ಆಝಾದ್, ಮಾಜಿ ಪ್ರಧಾನಿ ವಾಜಪೇಯಿ ತಮಗೆ ಸ್ಫೂರ್ತಿಯಾಗಿದ್ದರೆಂದು ತಿಳಿಸಿದರು. "ವಿಪಕ್ಷ ನಾಯಕರು ಹೇಗಿರಬೇಕೆಂಬುದನ್ನು ನಾನು ವಾಜಪೇಯಿಯವರಿಂದ ಕಲಿತೆ" ಎಂದು ಆಝಾದ್ ಹೇಳಿದರು.

ಜೂನ್ 8, 2014ರಿಂದ ಆರು ವರ್ಷಗಳ ಕಾಲ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದ ಆಝಾದ್ ಅವರ ಅವಧಿ ಫೆಬ್ರವರಿ 15ರಂದು ಕೊನೆಗೊಳ್ಳಲಿದೆ.

ಆಝಾದ್ ಅವರ ಕುರಿತು ಹಾಗೂ ಅವರ ಜತೆ ತಮಗಿರುವ ಅವಿನಾಭಾವ ಸಂಬಂಧ ಕುರಿತು ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಭಾವುಕರಾದರು. ಆಝಾದ್ ಅವರ ಸ್ಥಾನ ತುಂಬುವ ನಾಯಕರಿಗೆ ಕಠಿಣ ಸವಾಲಿದೆ ಎಂದು ಹೇಳಿದ ಮೋದಿ "ಆಜಾದ್ ಅವರಿಗೆ ಪಕ್ಷದ ಬಗ್ಗೆ ಕಾಳಜಿಯಿತ್ತು ಹಾಗೂ ಅದಕ್ಕಿಂತಲೂ ಹೆಚ್ಚು ಸದನ ಮತ್ತು ದೇಶದ ಬಗ್ಗೆ ಕಾಳಜಿಯಿತ್ತು" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News