ಮಾರ್ಚ್ ಮೊದಲ ವಾರ ರಾಜ್ಯ ಬಜೆಟ್: ಮುಖ್ಯಮಂತ್ರಿ ಯಡಿಯೂರಪ್ಪ
Update: 2021-02-09 22:47 IST
ದಾವಣಗೆರೆ, ಫೆ.9: ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಆವರಣದ ಪಕ್ಕದಲ್ಲಿ ನಿರ್ಮಿಸಿದ್ದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ಮಂಡನೆಗೆ ಎಲ್ಲಾ ಸಿದ್ಧತೆ ಪ್ರಾರಂಭವಾಗಿದೆ. ಪ್ರತಿಯೊಂದು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಮಾಲೋಚನೆ ಮಾಡಿ, ಇನ್ನೆರಡು ದಿನದಲ್ಲಿ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಮೂರು ತಿಂಗಳು ಕೋವಿಡ್ ಕಾರಣದಿಂದ ನಮ್ಮ ನಿರೀಕ್ಷೆಯಷ್ಟು ತೆರಿಗೆ ಸಂಗ್ರಹಮಾಡಲು ಸಾಧ್ಯವಾಗಿಲ್ಲ. ಈಗ ತೆರಿಗೆ ಸಂಗ್ರಹಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ಉತ್ತಮ ಪ್ರಗತಿ ಕಂಡಿದೆ. ಹೀಗಾಗಿ ಹಣಕಾಸಿನ ಇತಿಮಿತಿಯೊಳಗೆ ಎಲ್ಲಾ ವರ್ಗದವರು ಮೆಚ್ಚುವಂತಹ ಆಯವ್ಯಯ ಮಂಡನೆ ಮಾಡುತ್ತೇನೆ ಎಂದು ತಿಳಿಸಿದರು.