ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕಟ್ಟಡಗಳ ನೆಲಸಮಗೊಳಿಸಲು ಬಿಬಿಎಂಪಿ ಸಿದ್ಧತೆ

Update: 2021-02-09 17:21 GMT

ಬೆಂಗಳೂರು, ಫೆ.9: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 2009ರಿಂದ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮಗೊಳಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಗುರುತಿಸುವ ಸಂಬಂಧ ಅಧಿಕಾರಿಗಳೊಂದಿಗೆ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ಸಭೆ ನಡೆಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2009ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂಬ ಆದೇಶವಾಗಿದೆ. ಇದರನ್ವಯ 2009ರ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವುದು ಅಥವಾ ಸ್ಥಳಾಂತರ ಮಾಡುವುದು ಅಥವಾ ಕ್ರಮಬದ್ದವಾಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಸೂಕ್ತಕ್ರಮ ವಹಿಸಬೇಕು ಎಂದರು.

ಈ ಸಂಬಂಧ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತಹ ಧಾರ್ಮಿಕ ಕಟ್ಟಡಗಳ ಪಟ್ಟಿ ಮಾಡಿ ನೀಡಿದರೆ ಸಮೀಕ್ಷೆ ಆಧಾರದ ಮೇಲೆ ಅವುಗಳನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಇನ್ನು, 2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ಆದೇಶವಿದ್ದು, 2009ರ ನಂತರ ಎಲ್ಲೆಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿದ್ದಾರೆ ಎಂಬುದನ್ನು ಪಟ್ಟಿಮಾಡಿ ಕೂಡಲೆ ಸಂಬಂಧಪಟ್ಟವರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಬೇಕು ಎಂದು ಸೂಚಿಸಿದರು.

ಕಂದಾಯ ಅಧಿಕಾರಿಗಳು ಸ್ಥಳ ಸಮೀಕ್ಷೆ ನಡೆಸಿ ಸಂಬಂಧಪಟ್ಟ ಇಂಜಿನಿಯರ್ ಗಳು ಪೊಲೀಸ್ ಭದ್ರತೆಯೊಂದಿಗೆ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ತಿಳಿಸಿದರು.

ಈ ಹಿಂದೆ ಮಾಡಿರುವ ಸಮೀಕ್ಷೆಯಲ್ಲಿ ಸರಕಾರಿ ಜಾಗದಲ್ಲಿ 1,588 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂಬ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು. ಈ ಪೈಕಿ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಅದನ್ನು ಒಪ್ಪದೆ ಸರಕಾರಿ ಹಾಗೂ ಖಾಸಗಿ ಜಾಗದಲ್ಲಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಸಮಗ್ರವಾಗಿ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಧಾರ್ಮಿಕ ಕಟ್ಟಡಗಳು ನಿರ್ಮಿಸಿರುವ ಜಾಗ, ಸ್ಥಳದ ದಾಖಲೆ(ಜಮೀನಿನ ಕಾಗದ ಪತ್ರ) ಹಾಗೂ ಧಾರ್ಮಿಕ ಕಟ್ಟಡ ನಿರ್ಮಿಸಲು ಯಾವುದಾದರು ಇಲಾಖೆಯಿಂದ ಅನುಮತಿ ಪಡೆದಿದ್ದಾರೆಯೇ ಎಂಬ ಮಾಹಿತಿ ಸಂಗ್ರಹಿಸಬೇಕು. ಜೊತೆಗೆ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದೆಯಾ ? ಖಾಸಗಿ ಜಾಗದಲ್ಲಿ ನಿರ್ಮಿಸಲಾಗಿದೆಯಾ ಎಂಬುದನ್ನು ಗುರುತಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಜೆ.ಮಂಜುನಾಥ್, ಮನೋಜ್ ಜೈನ್, ಬಸವರಾಜ್, ರಾಜೇಂದ್ರ ಚೋಳನ್, ತುಳಸಿ ಮದ್ದಿನೇನಿ, ರೆಡ್ಡಿ ಶಂಕರ್ ಬಾಬು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News