ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಪ್ರಸ್ತಾವನೆ ಇಲ್ಲ: ಅಬಕಾರಿ ಸಚಿವ ಗೋಪಾಲಯ್ಯ

Update: 2021-02-09 17:32 GMT

ಬೆಂಗಳೂರು, ಫೆ.9: ರಾಜ್ಯದಲ್ಲಿ ಅಬಕಾರಿ ಇಲಾಖೆ ವತಿಯಿಂದ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಪರವಾನಿಗೆ ನೀಡುವ ಯಾವುದೆ ಪ್ರಸ್ತಾವನೆ ಇಲ್ಲ. ಈ ಬಗ್ಗೆ ಏನಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಮಂಗಳವಾರ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈನ್‍ಶಾಪ್ ಪಕ್ಕದಲ್ಲೆ ಹೊಸದಾಗಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕೆಂಬ ಬೇಡಿಕೆಯಿದೆ. ಈ ಬಗ್ಗೆ ಮುಖ್ಯಮಂತ್ರಿಯೇ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.

ನಮ್ಮ ಇಲಾಖೆಯಿಂದ ಹೊಸದಾಗಿ ಯಾವುದೆ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡುವ ಪ್ರಸ್ತಾವನೆ ಇಲ್ಲ. ಅಲ್ಲದೆ, ಆನ್‍ಲೈನ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ಕೊಡುವ ಪ್ರಸ್ತಾವನೆಯೂ ರಾಜ್ಯ ಸರಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ ಗೋಪಾಲಯ್ಯ, ಸಿಎಲ್ 7 ಮಳಿಗೆಗಳಿಗೆ ಕಾನೂನು ಪ್ರಕಾರ ಅನುಮತಿ ನೀಡಲಾಗುತ್ತಿದೆ ಎಂದರು.

2020-21ಸಾಲಿನನಲ್ಲಿ 19,433.76 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹವಾಗಿದೆ. 22,700 ಕೋಟಿ ರೂ. ವಾರ್ಷಿಕ ಗುರಿ ಹೊಂದಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 822.66 ಕೋಟಿ ರೂ. ಹೆಚ್ಚಿನ ಅಬಕಾರಿ ತೆರಿಗೆ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.

ಕಳೆದ ವರ್ಷ ಇದೇ ಅವಧಿಯಲ್ಲಿ 515.99 ಮದ್ಯ ಬಾಕ್ಸ್ ಎತ್ತುವಳಿಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 33.29 ಲಕ್ಷ ಮದ್ಯದ ಬಾಕ್ಸ್ ಎತ್ತುವಳಿ ಕಡಿಮೆಯಾಗಿದೆ. ಇನ್ನು 61.55 ಲಕ್ಷ ಬಿಯರ್ ಪೆಟ್ಟಿಗೆಗಳ ಎತ್ತುವಳಿ ಕಡಿಮೆಯಾಗಿದೆ ಎಂದು ಗೋಪಾಲಯ್ಯ ತಿಳಿಸಿದರು.

ಚಿಲ್ಲರೆ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಶೇ.20ರಷ್ಟು ಲಾಭಾಂಶ(ಕಮಿಷನ್) ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಶೇ.10ರಷ್ಟು ಇದ್ದು, ಅದನ್ನು ಶೇ.20ರಷ್ಟು ಏರಿಸಲು ಮನವಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಅಬಕಾರಿ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಅಬಕಾರಿ ಅಕ್ರಮಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಬಕಾರಿ ಉಪನಿರೀಕ್ಷಕರಿಗೆ 350 ದ್ವಿಚಕ್ರ ವಾಹನಗಳನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಅಬಕಾರಿ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ತಲಾ ನಾಲ್ಕು ಪಿಸ್ತೂಲುಗಳನ್ನು ನೀಡಲು ನಿರ್ಧರಿಸಲಾಗಿದೆ. ಅಲ್ಲದೆ, ಸಾಮಾಜಿಕ ಪಿಡುಗಾಗಿರುವ ಮಾದಕ ವಸ್ತು ನಿಯಂತ್ರಣಕ್ಕೂ ಅಬಕಾರಿ ಇಲಾಖೆ ಗಮನಹರಿಸಿದೆ. ಗಾಂಜಾ ಮಾರಾಟ ತಡೆಯಲು ಅಬಕಾರಿ ಇಲಾಖೆ ಶ್ರಮವಹಿಸಿದೆ ಎಂದು ಅವರು ಹೇಳಿದರು.

2020-21 ಸಾಲಿನಲ್ಲಿ ಡಿಸೆಂಬರ್ ವರೆಗೆ ರಾಜ್ಯಾದ್ಯಂತ 37,950 ದಾಳಿ ನಡೆಸಲಾಗಿದೆ. ಅಬಕಾರಿ ಕಾಯ್ದೆ ಉಲ್ಲಂಘನೆಗಾಗಿ 1,41,325ರಷ್ಟು ತಪಾಸಣೆ ಮಾಡಿ, 19,406 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ವೇಳೆ 12,239 ಮಂದಿಯನ್ನು ಬಂಧಿಸಿದ್ದು, 928 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 86,143 ಲೀಟರ್ ಮದ್ಯ, 32,679 ಲೀಟರ್ ಬಿಯರ್, 5,711 ಲೀಟರ್ ವೈನ್, 26,650 ಲೀಟರ್ ಮದ್ಯಸಾರವನ್ನು ವಶಪಡಿಸಿಕೊಳ್ಳಲಾಗಿದೆ. 3,423 ಲೀಟರ್ ಕಳ್ಳಭಟ್ಟಿ ಹಾಗೂ 14,473 ಲೀಟರ್ ಬೆಲ್ಲದ ಕೊನೆಯನ್ನು ನಾಶಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಎನ್‍ಡಿಪಿಎಸ್ ಕಾಯ್ದೆಯಡಿ ಇದುವರೆಗೂ ಸುಮಾರು 175 ಪ್ರಕರಣಗಳನ್ನು ದಾಖಲಿಸಿ 426 ಆರೋಪಿಗಳನ್ನು ಬಂಧಿಸಿ, 88 ವಾಹನಗಳನ್ನು ವಶಪಡಿಸಿಕೊಂಡು, 1320 ಕೆಜಿ ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗೋಪಾಲಯ್ಯ ತಿಳಿಸಿದರು.

ರಾಜ್ಯದಲ್ಲಿ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ತಡೆಯಲು ಕ್ರಮ ವಹಿಸಿದ್ದೇವೆ. ಎಂಎಸ್‍ಐಎಲ್ ಸಂಸ್ಥೆಗೆ 1363 ಚಿಲ್ಲರೆ ಮಾರಾಟ ಮದ್ಯ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಇಲ್ಲಿಯವರೆಗೂ 905 ಮಳಿಗೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News