ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಪ್ರಕ್ರಿಯೆ ಕ್ರಮಬದ್ಧ: ಬಸವರಾಜ ಹೊರಟ್ಟಿ

Update: 2021-02-09 18:07 GMT

ಬೆಂಗಳೂರು, ಫೆ.9: ವಿಧಾನಪರಿಷತ್‍ನಲ್ಲಿ ನಿನ್ನೆ(ಫೆ.8) ಗೋ ಹತ್ಯೆ ನಿಷೇಧ ವಿಧೇಯಕದ ಅಂಗೀಕಾರಕ್ಕೆ ನಡೆದ ಪ್ರಕ್ರಿಯೆ ಕ್ರಮಬದ್ಧವಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಆದೇಶಿಸಿದ್ದಾರೆ.

ಮಂಗಳಾರ ವಿಧಾನಪರಿಷತ್ ಮಧ್ಯಾಹ್ನದ ಕಲಾಪದಲ್ಲಿ ಮಾತನಾಡಿದ ಅವರು, ನಿನ್ನೆ(ಫೆ.8) ನಡೆದ ಗೋಹತ್ಯೆ ನಿಷೇಧ ವಿಧೇಯಕದ ಅಂಗೀಕಾರದ ಪ್ರಕ್ರಿಯೆಗಳ ವೀಡಿಯೋ, ಆಡಿಯೋ ಎಲ್ಲವನ್ನು ಗಮನಿಸಿದ್ದೇನೆ. ವಿಧೇಯಕವನ್ನು ಮತಕ್ಕೆ ಹಾಕುವಂತೆ ಕಾಂಗ್ರೆಸ್, ಜೆಡಿಎಸ್ ಸದಸ್ಯರು ತಮ್ಮ ಸ್ಥಾನದಲ್ಲಿ ನಿಂತು ಬೇಡಿಕೆ ಇಟ್ಟಿಲ್ಲ. ಈ ನಿಟ್ಟಿನಲ್ಲಿ ವಿಧೇಯಕದ ಅಂಗೀಕಾರದ ಪ್ರಕ್ರಿಯೆ ಸರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ವೇಳೆ ವಿರೋಧ ಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡಿ, ನಾನು, ನಸೀರ್ ಅಹ್ಮದ್ ಹಾಗೂ ಸಿ.ಎಂ.ಇಬ್ರಾಹಿಂ ತಮ್ಮ ಸ್ಥಾನಗಳಲ್ಲಿಯೇ ನಿಂತು ವಿಧೇಯಕವನ್ನು ಮತಕ್ಕೆ ಹಾಕಬೇಕೆಂದು ಬೇಡಿಕೆ ಇಟ್ಟಿದ್ದೇವೆ. ಆ ದೃಶ್ಯಾವಳಿಗಳು ಏನಾದವು ಎಂದು ಪ್ರಶ್ನಿಸಿದ್ದಾರೆ.

ಇವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸಭಾಪತಿಗಳು ಒಮ್ಮೆ ಆದೇಶ ಕೊಟ್ಟ ನಂತರ ಅದನ್ನು ಪ್ರಶ್ನಿಸಬಾರದೆಂದು ತಿಳಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಸಭಾಪತಿ ಆದೇಶವನ್ನು ಪ್ರಶ್ನಿಸುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಏನಾದರು ಗೊಂದಲಗಳಿದ್ದರೆ ನನಗೆ ಮನವಿ ಕೊಡಿ, ಪರಿಶೀಲಿಸುತ್ತೇನೆಂದು ತಿಳಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರ ಪ್ರಕ್ರಿಯೆ ಅಸಂವಿಧಾನಿಕ, ಅಪ್ರಜಾಪ್ರಭುತ್ವದಿಂದ ಕೂಡಿದೆ. ಇದಕ್ಕೆ ನಮ್ಮ ಸಮ್ಮತವಿಲ್ಲ, ಬಿಜೆಪಿ ರೈತ ವಿರೋಧಿಯಾಗಿದೆಯೆಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇದರ ನಡುವೆಯೇ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News