ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ- ಮಾಜಿ ಸಚಿವ ಡಾ.ಮಹೇವದಪ್ಪ ಭೇಟಿ
ಬೆಂಗಳೂರು, ಫೆ. 10: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪರಸ್ಪರ ಭೇಟಿ ಮಾಡಿ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.
ಬುಧವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿರುವ ಡಾ.ಮಹಾದೇವಪ್ಪ ನಿವಾಸಕ್ಕೆ ತೆರಳಿದ ಸಿದ್ದರಾಮಯ್ಯ ಅವರು ಪರಸ್ಪರ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ‘ವಾರ್ತಾಭಾರತಿ' ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮಹದೇವಪ್ಪ, ‘ಕೆಲ ದಿನಗಳಿಂದ ನನಗೆ ಕಾಲು ನೋವಿನ ಸಮಸ್ಯೆ ಆಗಿತ್ತು. ಹೀಗಾಗಿ ಇಬ್ಬರು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇಂದು ಸಿದ್ದರಾಮಯ್ಯನವರು ನನ್ನ ನಿವಾಸಕ್ಕೆ ಆಗಮಿಸಿ ಆರೋಗ್ಯ ವಿಚಾರಿಸಿದರು. ಅದನ್ನು ಹೊರತುಪಡಿಸಿದರೆ ಈ ಭೇಟಿಗೆ ವಿಶೇಷವೇನು ಇಲ್ಲ' ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ನಾನು ಮತ್ತು ಮಹದೇವಪ್ಪ ಯಾವುದೇ ಸಂಘಟನೆ ಕುರಿತು ಸಮಾಲೋಚನೆ ನಡೆಸಿಲ್ಲ. ನಾನು ಹೇಳದ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ. ‘ಹಿಂದ' ಸಂಘಟನೆ ಮಾಡುವ ಬಗ್ಗೆಯೂ ಚರ್ಚಿಸಿಲ್ಲ. ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರಿಗೆ ಮೀಸಲಾತಿ ಸಿಗಬೇಕು ಎಂಬುದು ನನ್ನ ನಿಲುವು' ಎಂದು ಹೇಳಿದರು.
ಶೋಷಣೆಗೆ ಗುರಿಯಾದವರಿಗೆ ಮೀಸಲಾತಿ ದೊರೆಯಬೇಕೆಂಬುದು ಸಂವಿಧಾನದ ಆಶಯ. ಯಾವುದೇ ಸಮುದಾಯ ಮೀಸಲಾತಿಗೆ ಆಗ್ರಹಿಸಿದರೆ ನಾನು ವಿರೋಧಿಸುವುದಿಲ್ಲ. ಯಾರೇ ಬೇಕಾದರೂ ಮೀಸಲಾತಿಗಾಗಿ ಹೋರಾಟ ಮಾಡಬಹುದು ಎಂದ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ ಹೇಳಿಕೆಯೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ನಿರಾಕರಿಸಿದರು.
ಅನಾರೋಗ್ಯ ಹಿನ್ನೆಲೆ ಹೊರಗೆ ಬಂದಿರಲಿಲ್ಲ: ‘ನನ್ನ ಹಾಗೂ ಸಿದ್ದರಾಮಯ್ಯ ನಡುವಿನ ಬಾಂಧವ್ಯ ಹಿಂದೆ ಹೇಗಿತ್ತೋ ಇಂದಿಗೂ ಹಾಗೆಯೇ ಇದೆ. ಸಂವಿಧಾನದ ಆಶಯಕ್ಕೆ ಧಕ್ಕೆಯಾದಾಗ ಸದಾ ಹೋರಾಟ ಮಾಡುತ್ತಾ ಬಂದಿದ್ದೇವೆ. ನಾವು ಬರೀ ಅಧಿಕಾರ ಮಾಡ್ತಾ ಇದ್ದವರಲ್ಲ. ನನಗೆ ಆರೋಗ್ಯ ಸಮಸ್ಯೆ ಆಗಿದ್ದರಿಂದ ಕೆಲವು ಕಾಲ ಮನೆಯಿಂದ ಹೊರಗೆ ಬಂದಿಲ್ಲ' ಎಂದು ಡಾ.ಮಹದೇವಪ್ಪ ತಿಳಿಸಿದರು.
‘ವಿಷಯಾಧಾರಿತ ಹೋರಾಟ ನಡೆಯಲೇಬೇಕು. ಇದೀಗ ರೈತರ ಹೋರಾಟ ನಡೆದಿಲ್ಲವೇ..? ದಲಿತರು ಹೋರಾಟ ನಡೆಸುವ ಇಚ್ಛೆ ಹೊಂದಿದ್ದಾರೆ. ಯಾವುದೇ ಸಮಸ್ಯೆ ಆದಾಗಲೇ ಹೋರಾಟಗಳು ಹುಟ್ಟಿಕೊಳ್ಳುತ್ತವೆ. ಆದರೆ, ನಾನು ಮತ್ತು ಸಿದ್ದರಾಮಯ್ಯನವರು ‘ಅಹಿಂದ, ಹಿಂದ' ಹೋರಾಟ ಪುನರ್ ಆರಂಭಿಸುವ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ' ಎಂದು ಮಹದೇವಪ್ಪ ಸ್ಪಷ್ಟಪಡಿಸಿದರು.