ಕೇಂದ್ರ ಸರಕಾರ ಜನತೆಯನ್ನು ಭಿಕಾರಿ ಮಾಡಲು ಹೊರಟಿದೆ: ವಾಟಾಳ್ ನಾಗರಾಜ್

Update: 2021-02-11 14:08 GMT

ಬೆಂಗಳೂರು, ಫೆ.11: ಕೇಂದ್ರ ಸರಕಾರದ ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಭಿಕಾರಿಗಳನ್ನಾಗಿ ಮಾಡಲು ಹೊರಟಿದೆ ಎಂದು ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ವಾಟಾಳ್ ಪಕ್ಷದ ವತಿಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಖಂಡಿಸಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕತ್ತೆಯ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದ ಅವರು, ಜನವಿರೋಧಿಯಾದ ಕೇಂದ್ರ ಸರಕಾರ ಆಡಳಿತ ನಡೆಸುವುದಕ್ಕೆ ಯಾವುದೇ ನೈತಿಕತೆಯಿಲ್ಲವೆಂದು ಟೀಕಿಸಿದ್ದಾರೆ.

ಈಗಾಗಲೇ ಕೋವಿಡ್‍ನಿಂದಾಗಿ ಶೇ.90ರಷ್ಟು ಜನತೆ ನಿರುದ್ಯೋಗಿಗಳಾಗಿದ್ದಾರೆ. ತಮ್ಮ ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರಕಾರವನ್ನು ಜನತೆಯ ಸರಕಾರವೆಂದು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರ ಅಂಬಾನಿ, ಅದಾನಿ ಸೇರಿದಂತೆ ಬಂಡವಾಳಶಾಹಿಗಳ ಪರವಾಗಿ ಯೋಜನೆಗಳನ್ನು ಜಾರಿ ಮಾಡಲು ಹಪಹಪಿಸುತ್ತಿದೆ. ಇದರಿಂದ ಜನಸಾಮಾನ್ಯರು ಯಾವ ರೀತಿಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆಂಬುದರ ಕಡೆಗೆ ಕಿಂಚಿತ್ತೂ ಯೋಚನೆ ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಇಡೀ ದೇಶದ ಜನತೆ ಬೀದಿಗೆ ಇಳಿಯಲಿದ್ದಾರೆಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಕನ್ನಡ ವಾಟಾಳ್ ಪಕ್ಷದ ಪಾರ್ಥಸಾರಥಿ, ಜಾಫರ್ ಸಾದಿಕ್, ಮುನ್ನಾವರ್ ಮುನ್ನಾ, ರಾಜಾಹುಲಿ, ರಾಘವೇಂದ್ರ, ಶಶಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News