×
Ad

ಎಟಿಎಂ ಯಂತ್ರಕ್ಕೆ ಹಾಕುವ ಹಣ ಕದ್ದು ಪರಾರಿಯಾಗಿದ್ದ ಆರೋಪಿಯ ಬಂಧನ

Update: 2021-02-11 21:16 IST

ಬೆಂಗಳೂರು, ಫೆ.11: ಎಟಿಎಂ ಯಂತ್ರಕ್ಕೆ ಹಾಕಬೇಕಿದ್ದ ಸುಮಾರು 64 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದ ಆರೋಪಿ ಚಾಲಕನನ್ನು ಸುಬ್ರಹ್ಮಣ್ಯ ನಗರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಮಂಡ್ಯ ಮೂಲದ ಯೋಗೇಶ್ ಎಂದು ಗುರುತಿಸಲಾಗಿದೆ. ಕಳೆದ ಫೆ. 3ರಂದು ಎಟಿಎಂ ಹಣ ಕದ್ದು ಅತ್ತೆ ಮಗಳೊಂದಿಗೆ ಪರಾರಿಯಾಗಿದ್ದ ಆರೋಪಿ ಯೋಗೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಚಾಲಕನಾಗಿದ್ದ ಆರೋಪಿ ಯೋಗೇಶ್ ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷರೂ. ಹಣ ಕದ್ದು ಪರಾರಿಯಾಗಿದ್ದ. ಆರೋಪಿಯ ಪತ್ತೆಗೆ ಸುಬ್ರಹ್ಮಣ್ಯ ನಗರ ಪೊಲೀಸರು ಮುಂದಾಗಿದ್ದರು. ಹಣ ಕದ್ದ ಬಳಿಕ ಮೈಸೂರಿನ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ ಆರೋಪಿಯ ಮೊಬೈಲ್ ನೆಟ್‍ವರ್ಕ್ ಆಧಾರದ ಮೇಲೆ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.

ಹೆಂಡತಿ, ಮಕ್ಕಳಿದ್ದರೂ ಅತ್ತೆ ಮಗಳ ಜೊತೆ ಹಣದೊಂದಿಗೆ ಪರಾರಿಯಾಗಿದ್ದ ಯೋಗೇಶ್, ಬಂಧನದ ಬಳಿಕ ಪೊಲೀಸರಿಗೇ ಆಶ್ಚರ್ಯವಾಗಿದ್ದು, ಎಟಿಎಂಗೆ ತುಂಬುವ 64 ಲಕ್ಷ ರೂ. ಹಣ ಕದ್ದ ಆತನ ಬಳಿ ಕೇವಲ 15 ಸಾವಿರ ರೂ. ಮಾತ್ರ ಇತ್ತು. ಉಳಿದ ಹಣವೆಲ್ಲಿ ಎಂದು ಬಾಯಿ ಬಿಡದೆ ಸತಾಯಿಸುತ್ತಿರುವ ಯೋಗೇಶ್‍ನನ್ನು ವಿಚಾರಣೆ ನಡೆಸಲಾಗುತ್ತಿದೆ. ಸುಬ್ರಮಣ್ಯನಗರ ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.

ಯೋಗೇಶ್ ಕಳವು ಮಾಡಿದ 64 ಲಕ್ಷ ರೂ.ತೆಗೆದುಕೊಂಡು ಪ್ರೇಯಸಿಯೊಂದಿಗೆ ಪರಾರಿಯಾಗಿದ್ದ. ಆತನ ಗ್ರಾಮವಾದ ಮಂಡ್ಯ, ಹಾಸನ ಸೇರಿದಂತೆ ಪೊಲೀಸರು ಹುಡುಕಾಟ ನಡೆಸಿದ್ದರೂ ಆತ ಸಿಕ್ಕಿರಲಿಲ್ಲ. ಕೊನೆಗೂ ಮೈಸೂರಿನಲ್ಲಿ ಸಿಕ್ಕಿಬಿದ್ದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News