×
Ad

ಹೊಸ ‘ಪಾರ್ಕಿಂಗ್ ನೀತಿ-2.0' ಜಾರಿ: ವಾಹನ ನಿಲುಗಡೆಗೆ ಶುಲ್ಕ ನಿಗದಿ

Update: 2021-02-11 21:20 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ. 11: ನಗರದಲ್ಲಿ ಮನಸೋ ಇಚ್ಛೆ ವಾಹನ ನಿಲ್ಲಿಸುವುದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರಕಾರ, ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಪಾವತಿ ಪಾರ್ಕಿಂಗ್ ವ್ಯವಸ್ಥೆಗೆ ಬದಲಾಯಿಸಲು ‘ಪಾರ್ಕಿಂಗ್ ನೀತಿ-2.0'ಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯದ ಪರಿಷ್ಕೃತ ಪಾರ್ಕಿಂಗ್ ನೀತಿಗೆ ಅನುಮೋದನೆ ನೀಡಲಾಗಿದೆ.

ಮನೆ ಮುಂದೆ ವಾಹನ ಪಾರ್ಕಿಂಗ್ ಮಾಡಲು ಅನುಮತಿ ಕಡ್ಡಾಯ. ವಾಹನ ನಿಲುಗಡೆಗೆ ಸ್ಥಳಾವಕಾಶವಿದ್ದರೆ ಮಾತ್ರ ಹೊಸ ವಾಹನ ಖರೀದಿಗೆ ಅವಕಾಶ ನೀಡಲು ನೂತನ ನಿಯಮದಲ್ಲಿ ಷರತ್ತು ವಿಧಿಸಲಾಗಿದೆ. ಅಲ್ಲದೆ, ವಾಹನಗಳ ಗಾತ್ರಕ್ಕೆ ತಕ್ಕಂತೆ ಅನುಮತಿಗೆ ಪ್ರದೇಶವಾರು ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲಾಗಿದೆ. ವಾಹನ ಪಾರ್ಕಿಂಗ್‍ಗೆ ವಾರ್ಷಿಕ ದರ ನಿಗದಿ ಮಾಡುವ ಬಗ್ಗೆ ಯೋಜನೆ ರೂಪಿಸಲಾಗಿದೆ.

ದರ ನಿಗದಿ: ಚಿಕ್ಕ ವಾಹನಗಳಿಗೆ ವಾರ್ಷಿಕ 1 ಸಾವಿರ ರೂ., ಮಧ್ಯಮ ಗಾತ್ರದ ಕಾರಿಗೆ ವಾರ್ಷಿಕ 3 ಸಾವಿರ ರೂ.ನಿಂದ 4 ಸಾವಿರ ರೂ., ದೊಡ್ಡ ಗಾತ್ರದ ಕಾರುಗಳಿಗೆ 5 ಸಾವಿರ ರೂ.ದರವನ್ನು ನಿಗದಿ ಮಾಡಲಾಗಿದೆ. ವಾಹನ ಪರ್ಮಿಟ್ ಪಡೆಯುವಾಗ ದರ ಪಾವತಿ ಮಾಡಬೇಕು. ವಾಹನ ಪಾರ್ಕ್ ಮಾಡುವುದಕ್ಕೆ ಆಯಾ ಸ್ಥಳಕ್ಕೆ ಹಾಗೂ ಸಮಯಕ್ಕೆ ತಕ್ಕಂತೆ ದರ ನಿಗದಿ ಬಗ್ಗೆ ಪ್ರಸ್ತಾವನೆ ಮಾಡಲಾಗಿದೆ.

ನಗರದಲ್ಲಿ ಮೇ 2020ರ ವೇಳೆಗೆ ವಾಹನಗಳ ಸಂಖ್ಯೆ 94 ಲಕ್ಷ ದಾಟಿದ್ದು, ವಾಹನ ನೋಂದಣಿಯ ವಾರ್ಷಿಕ ಏರಿಕೆ ದರ ಶೇ.10ಕ್ಕಿಂತ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಸಮಸೆ ತೀವ್ರ ಸ್ವರೂಪದಲ್ಲಿದೆ. ಹೀಗಾಗಿ ದಟ್ಟಣೆಗೆ ಕಡಿವಾಣ ಹಾಕಲು ಪಾರ್ಕಿಂಗ್ ನೀತಿ ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News