ಮಿಶ್ರ ವೈದ್ಯಕೀಯ ಪದ್ಧತಿಗೆ ವಿರೋಧ: ವೈದ್ಯಕೀಯ ಸಂಘದ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ

Update: 2021-02-11 15:54 GMT

ಬೆಂಗಳೂರು, ಫೆ.11: ಕೇಂದ್ರ ಭಾರತೀಯ ವೈದ್ಯಕೀಯ ಮಂಡಳಿ (ಸಿಸಿಐಎಂ) ಜಾರಿಗೆ ತರಲು ಉದ್ದೇಶಿಸಿರುವ ಮಿಶ್ರ ವೈದ್ಯಕೀಯ (ಮಿಕ್ಟೋಪತಿ) ಪದ್ಧತಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 12ನೇ ದಿನಕ್ಕೆ ಕಾಲಿಟ್ಟಿದೆ.

ಕೇಂದ್ರ ಸರಕಾರ ತಂದಿರುವ ನೂತನ ಆಯುರ್ವೇದ ಶಿಕ್ಷಣ ನಿಯಮಾವಳಿ ಅಧಿಸೂಚನೆಯಂತೆ ಇನ್ನು ಮುಂದೆ ಆಯುರ್ವೇದ ಪದ್ಧತಿಯಲ್ಲಿ ಕಣ್ಣು, ಮೂಗು, ಗಂಟಲು, ಕಿವಿ, ಮೂಳೆ, ಹಲ್ಲು ಹೀಗೆ ವಿವಿಧ ಅಂಗಾಂಗಗಳ ಶಸ್ತ್ರ ಚಿಕಿತ್ಸೆ ಸೇರಿ ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್, ಹಲ್ಲಿನ ರೂಟ್ ಕೆನಾಲ್ ಸೇರಿ ಹಲವು ಶಸ್ತ್ರ ಚಿಕಿತ್ಸೆಗೆ ಅವಕಾಶ ಕಲ್ಪಿಸಿದೆ. ಎಲ್ಲಾ ವೈದ್ಯ ಪದ್ಧತಿಗಳನ್ನು ಮಿಶ್ರಗೊಳಿಸುವ ಅವೈಜ್ಞಾನಿಕ ಆದೇಶ ಇದಾಗಿದೆ ವೈದ್ಯಕೀಯ ಸಂಘ ಆರೋಪಿಸಿದೆ.

ಎನ್‍ಎಂಸಿ ಸೆಕ್ಷನ್ 32 ಪ್ರಕಾರ ವೈದ್ಯಕೀಯೇತರಿಗೆ ಸಮಾನ ಆರೋಗ್ಯ ರಕ್ಷಕ ಹೆಸರಿನಲ್ಲಿ ಸ್ವತಂತ್ರವಾಗಿ ಪ್ರಾಥಮಿಕ ಚಿಕಿತ್ಸೆ ನಿರ್ವಹಿಸುವ ಅವಕಾಶ ಕಲ್ಪಿಸಿ, ಸರಕಾರ ನಕಲಿ ವೈದ್ಯರ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ.ಸವಿತಾ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಂದು ಔಷಧಿಯ ಪದ್ಧತಿಯ ವೈದ್ಯರನ್ನು ಬೇರೆ ಬೇರೆಯಾಗಿ ಗುರುತಿಸಬೇಕು ಹಾಗೂ ಸಂಶೋಧನೆ ಮತ್ತು ಬೆಳವಣಿಗೆಗಳು ಆಯಾ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯಬೇಕು ಮತ್ತು ಪ್ರತಿಯೊಬ್ಬರು ತಮ್ಮದೇಯಾದ ವೈದ್ಯಕೀಯ ಪದ್ಧತಿಯನ್ನು ಅನುಸರಿಸಬೇಕು ಎನ್ನುವ ಬೇಡಿಕೆ ಐಎಂಎಯದಾಗಿದ್ದು, ಎಂಬಿಬಿಎಸ್ ಓದದೆ ಶಸ್ತ್ರಚಿಕಿತ್ಸೆ ಮಾಡುವುದು ಗಂಭೀರ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಡಾ.ಶಶಿಕುಮಾರ್ ಅಭಿಪ್ರಾಯಿಸಿದ್ದಾರೆ.

ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದಲ್ಲಿ ಚೆಲ್ಲಾಟವಾಡಬಾರದು. ಪ್ರತಿಯೊಂದು ಪದ್ದತಿಗೂ ಅದರದೇ ವೈಶಿಷ್ಟತೆ, ಮಿತಿಗಳಿರುತ್ತವೆ. ಆ ಬಗ್ಗೆ ಗಮನಿಸದೆ ಎಲ್ಲವನ್ನು ಮಿಶ್ರಣ ಮಾಡಲು ಹೊರಟಿರುವುದು ಸರಿಯಲ್ಲ. ಹೀಗಾಗಿ ಕೂಡಲೇ ಮಿಶ್ರ ವೈದ್ಯಕೀಯ ಪದ್ದತಿಯನ್ನು ವಾಪಸ್ ಪಡೆಯಬೇಕೆಂದು ಭಾರತೀಯ ವೈದ್ಯಕೀಯ ಸಂಘ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News