×
Ad

'ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ' ನೀಡಲು ರಾಜ್ಯಸಭೆಯಲ್ಲಿ ಡಾ.ಎಲ್.ಹನುಮಂತಯ್ಯ ಆಗ್ರಹ

Update: 2021-02-11 21:29 IST

ಹೊಸದಿಲ್ಲಿ, ಫೆ.11: ಶಾಸ್ತ್ರಿಯ ಸ್ಥಾನಮಾನ ಪಡೆದ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕೆಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಗುರುವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದರು.

ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಡಾ.ಎಲ್.ಹನುಮಂತಯ್ಯ, 2008 ರಲ್ಲಿಯೆ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ, ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನವನ್ನು ನೀಡಬೇಕೆಂದು ಕರ್ನಾಟಕ ಸರಕಾರ ಸೇರಿದಂತೆ, ಕನ್ನಡ ಭಾಷಾ ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರು ಅನೇಕ ವರ್ಷಗಳಿಂದ ಕೇಂದ್ರ ಸರಕಾರಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.

ಇತ್ತೀಚಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಮೈಸೂರಿನ ‘ಭಾರತೀಯ ಭಾಷಾ ಕೇಂದ್ರವನ್ನು' ಹಾಗೂ ‘ಭಾರತೀಯ ಅನುವಾದ ಮತ್ತು ವ್ಯಾಖ್ಯಾನ ಸಂಸ್ಥೆಯನ್ನು' ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ(ಬಿಬಿವಿ) ಪರಿವರ್ತಿಸಲು ಪ್ರಸ್ತಾಪ ನೀಡಿದೆ ಎಂದು ಹನುಮಂತಯ್ಯ ಹೇಳಿದರು.

ಕೇಂದ್ರ ಸರಕಾರವು ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಶಾಸ್ತ್ರೀಯ ಭಾಷಾ ಸಂಸ್ಥೆಗಳನ್ನು ಭಾರತೀಯ ಭಾಷಾ ವಿಶ್ವ ವಿದ್ಯಾಲಯವನ್ನಾಗಿ (ಬಿಬಿವಿ) ಅಡಿಯಲ್ಲಿ ತರಲು ಎನ್.ಗೋಪಾಲಸ್ವಾಮಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕೆಲವು ನಿಯಮಗಳನ್ನು ನೀಡಿ ಸಲಹೆಗಳನ್ನು ಕೋರಿದೆ ಎಂದು ಅವರು ತಿಳಿಸಿದರು.

ನಾವು ಬೇಡಿಕೆಯಿಟ್ಟಿದ್ದು ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥೆಯು ಸ್ವಾಯತ್ತತೆ ಹಾಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕೆಂದು. ಆದರೆ, ಕೇಂದ್ರ ಸರಕಾರ ಇಲ್ಲಿ ಎಲ್ಲ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದ ಶಾಸ್ತ್ರೀಯ ಭಾಷಾ ಸಂಸ್ಥೆಗಳನ್ನು ಭಾರತೀಯ ಭಾಷಾ ವಿಶ್ವವಿದ್ಯಾಲಯದ ಅಧೀನದಲ್ಲಿ ತರಲು ಪ್ರಯತ್ನಿಸುತ್ತಿದೆ. ಇದು ಪ್ರತ್ಯೇಕ ಹಾಗು ಸ್ವಾಯತ್ತತೆ ಇಲ್ಲದ ಯಾವುದೇ ಶಾಸ್ತ್ರೀಯ ಭಾಷೆಯ ಸಂಸ್ಥೆಗಳ ಬೆಳವಣಿಗೆಗೆ ಹಾನಿಕರ ಎಂದು ಹನುಮಂತಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ನಾನು ಸೇರಿದಂತೆ ರಾಜ್ಯದ ನಿಯೋಗದೊಂದಿಗೆ ಕೇಂದ್ರ ಸರಕಾರದ ಈ ಹಿಂದಿನ ಮಾನವ ಸಂಪನ್ಮೂಲ ಸಚಿವರಾದ ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್ ಸೇರಿದಂತೆ ಪ್ರಸ್ತುತ ಮಾನವ ಸಂಪನ್ಮೂಲ ಸಚಿವರಿಗೂ ಕನ್ನಡ ಭಾಷೆಗೆ ಸ್ವಾಯತ್ತ ಸ್ಥಾನಮಾನ ನೀಡುವುದರ ಬಗ್ಗೆ ಪ್ರಸ್ತಾಪ ನೀಡಿದ್ದೇವೆ. ಮೂವರು ಸಚಿವರೂ ಕೂಡ ಈ ಪ್ರಸ್ತಾಪನೆಯನ್ನು ಒಪ್ಪಿ ಕನ್ನಡಕ್ಕೆ ಸ್ವಾಯತ್ತತೆ ಸ್ಥಾನಮಾನವನ್ನು ಕೊಡುವುದರ ಬಗ್ಗೆ ಖಚಿತಪಡಿಸಿದ್ದರು. ಆದರೆ, ಇಲ್ಲಿಯವರೆಗೂ ನೀಡಿಲ್ಲ ಎಂದು ಅವರು ಹೇಳಿದರು.

ಸ್ವಾಯತ್ತ ಸ್ಥಾನಮಾನ ನೀಡದ ಹೊರತಾಗಿ ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಭಾಷೆಗಳ ಕೆಲಸ ಪರಿಪೂರ್ಣಗೊಳ್ಳುವುದಿಲ್ಲ. ಅದಕ್ಕೆ ಉದಾಹರಣೆಯೆಂದರೆ ಕೇಂದ್ರ ಸರಕಾರ ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನದ ಜೊತೆಗೆ ಸ್ವಾಯುತ್ತ ಸ್ಥಾನಮಾನವನ್ನು ಸಹ ನೀಡಿದ್ದರಿಂದ ಅಲ್ಲಿ ಅತ್ಯುತ್ತಮ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಆದರೆ, ಉಳಿದ ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನವನ್ನು 2008ರಲ್ಲಿಯೆ ನೀಡಿದ್ದರೂ ಸ್ವಾಯತ್ತತೆಯ ಸ್ಥಾನಮಾನವನ್ನು ಇನ್ನು ನೀಡಲಾಗಿಲ್ಲ ಎಂದು ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

ಉಳಿದ ಭಾಷೆಗಳಿಗೆ ಇನ್ನು ಯಾಕೆ ಈ ಸ್ಥಾನಮಾನವನ್ನು ನೀಡಲಾಗುತ್ತಿಲ್ಲ ಎಂದು ಕೇಂದ್ರ ಸರಕಾರ ಉತ್ತರಿಸಬೇಕಿದೆ. ಮತ್ತು ಅದರ ಬಗ್ಗೆ ಸರಕಾರ ಹೆಚ್ಚಿನ ಒಲವು ತೋರಿಸಿ ಒಂದು ನಿರ್ಧಾರಕ್ಕೆ ಬರಬೇಕೆಂದು ಹನುಮಂತಯ್ಯ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News