ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಡೋಕೆ ಈಶ್ವರಪ್ಪ ಯಾರು?: ಸಿದ್ದರಾಮಯ್ಯ

Update: 2021-02-11 16:27 GMT
File Photo

ಹುಬ್ಬಳ್ಳಿ, ಫೆ.11: ಕುರುಬರ ಮೀಸಲಾತಿ ಹೋರಾಟದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಒಡೆಯುವುದೆ ಅವರ ಮುಖ್ಯ ಉದ್ದೇಶ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದ್ದಾರೆ.

ಗುರುವಾರ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎಸ್.ಈಶ್ವರಪ್ಪ ಹೋರಾಟ ಮಾಡುತ್ತಿರೋದು ಯಾರ ವಿರುದ್ಧ? ತಮ್ಮದೇ ಸರಕಾರದ ವಿರುದ್ಧವಲ್ಲವೇ? ಆರೆಸ್ಸೆಸ್ ನವರು ಕುಮ್ಮಕ್ಕು ಕೊಟ್ಟು, ಈಶ್ವರಪ್ಪರನ್ನು ಎತ್ತಿಕಟ್ಟಿ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆದೇಶಿಸಿದ್ದೆ, ಈಗಲೂ ಅಧ್ಯಯನ ನಡೆಯುತ್ತಿದೆ, ಅದು ಮುಗಿದು ವರದಿ ಬಂದ ನಂತರ ಸರಕಾರದ ಮೇಲೆ ಒತ್ತಡ ಹೇರಬೇಕು. ಈಗಲೆ ಸಮಾವೇಶ, ರ್‍ಯಾಲಿಗಳನ್ನು ಮಾಡುವುದು ಅನಗತ್ಯ ಅನ್ನೋದು ನನ್ನ ಅನಿಸಿಕೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಸರಕಾರ ಇದ್ದಾಗ ಬೀದರ್, ಗುಲ್ಬರ್ಗ, ಯಾದಗಿರಿ ಜಿಲ್ಲೆಗಳಲ್ಲಿರುವ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಕುರುಬರನ್ನು ಎಸ್ಟಿಗೆ ಸೇರಿಸಬಾರದು ಎಂದು ನಾನು ಎಲ್ಲಿಯೂ ಹೇಳಿಲ್ಲ. ರಾಜಕೀಯ ಕಾರಣಗಳಿಗಾಗಿ ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ದೂರಿದರು.

5 ವರ್ಷ ಮುಖ್ಯಮಂತ್ರಿಯಾಗಿ ನಾಡಿನ ಶೋಷಿತ ಸಮುದಾಯಗಳಿಗಾಗಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎಂದು ಜನರಿಗೆ ಗೊತ್ತು. ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಡೋಕೆ ಈಶ್ವರಪ್ಪ ಯಾರು? ಅವರು ಕೊಡೋ ಸರ್ಟಿಫಿಕೇಟ್ ಅಗತ್ಯ ನನಗಿಲ್ಲ. ಅವರ ಸರಕಾರ ಈವರೆಗೆ ಶೋಷಿತ ಸಮುದಾಯಗಳಿಗಾಗಿ ಏನು ಮಾಡಿದೆ ಅನ್ನೋದನ್ನು ಮೊದಲು ಹೇಳಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಅಹಿಂದ ಅಥವಾ ಹಿಂದ ಸಮಾವೇಶದ ಬಗ್ಗೆ ಯಾವುದೆ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಅಹಿಂದ ಹಾಗೂ ಸಾಮಜಿಕ ನ್ಯಾಯದ ಪರವಾಗಿದೆ. ಆದರೆ, ಬಿಜೆಪಿ ಸಾಮಾಜಿಕ ನ್ಯಾಯದ ಪರವಾಗಿಲ್ಲ. ಅವರ ನೋಡಿ ನೋಡಿ. ಯಾವಾಗಲೂ ಅವರು ಮೀಸಲಾತಿಯನ್ನು ವಿರೋಧ ಮಾಡಿಕೊಂಡೆ ಬಂದವರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಬಿಜೆಪಿಗೆ ಜೆಡಿಎಸ್ ಸಹಾಯ: ಉಪ ಚುನಾವಣೆಯಲ್ಲಿ ಜೆಡಿಎಸ್‍ನವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೊ ಇಲ್ಲವೊ ಎಂಬುದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಳಿಯೇ ಕೇಳಿ, ನನಗೆ ಈ ಬಗ್ಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಉಪಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೆಡಿಎಸ್ ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ತಮಗಿರುವ ಅಲ್ಪಸ್ವಲ್ಪ ಬಲವನ್ನು ಬಿಜೆಪಿಗೆ ಧಾರೆಯೆರೆದು ಆ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕದೆ ಇರಬಹುದು ಎಂದು ಸಿದ್ದರಾಮಯ್ಯ ಹೇಳಿದರು.

ನಮಗೆ ಕಾರ್ಯಕರ್ತರ ಕೊರತೆಯಿಲ್ಲ, ಪಕ್ಷದ ಶಕ್ತಿ ಕುಂದಿಲ್ಲ. ನಾವು ವಿರೋಧ ಪಕ್ಷದಲ್ಲಿದ್ದು ಹೋರಾಟ ಮಾಡುತ್ತೇವೆ. ಬಿಜೆಪಿಯವರು ಅಧಿಕಾರದಲ್ಲಿದ್ದು ಹೇರಳವಾಗಿ ದುಡ್ಡು ಖರ್ಚು ಮಾಡಬಹುದು. ಉತ್ತರ ಕರ್ನಾಟಕ ಭಾಗದ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ, ಮಸ್ಕಿ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಗಳಿಗೆ ಯಾವ ಸಂದರ್ಭದಲ್ಲಿ ಬೇಕಾದರೂ ಉಪ ಚುನಾವಣೆ ಘೋಷಣೆಯಾಗಬಹುದು ಎಂದು ಅವರು ಹೇಳಿದರು.

ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂಬಂಧ ಈಗಾಗಲೆ ಚರ್ಚೆಗಳು ನಡೆದಿವೆ. ಉಪ ಚುನಾವಣೆ ಘೋಷಣೆಯಾದ ಕೂಡಲೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News