×
Ad

ಐಟಿ ಉದ್ಯೋಗಿ ಮೇಲೆ ಹಲ್ಲೆ ನಡೆಸಿ ದರೋಡೆ ಪ್ರಕರಣ: ಆರೋಪಿಗಳ ಬಂಧನ, ನಗದು ಜಪ್ತಿ

Update: 2021-02-11 22:29 IST

ಮೈಸೂರು,ಫೆ.11: ಐಟಿ ಉದ್ಯೋಗಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ ನಗದು, ಬೈಕ್ ನ್ನು ಕಿತ್ತುಕೊಂಡಿದ್ದ ಮೂವರನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದು, 42,000ರೂ. ನಗದು ಹಣ, 2 ದ್ವಿಚಕ್ರ ವಾಹನಗಳು, ಮೂರು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನ ಖಾಸಗಿ ಐಟಿ ಕಂಪನಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಮೂಲದ ಯುವಕನನ್ನು ನಾಲ್ಕು ಜನ ಅಪರಿಚಿತ ಯುವಕರು ಜ.31ರಂದು ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗೊಳ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಆತನ ತಲೆ, ಮುಖ ಮತ್ತು ಕೈ ಮೇಲೆ ಸೆರಾಮಿಕ್‍ ಪೀಸ್ ಮತ್ತು ಖಾಲಿ ಬೀಯರ್ ಬಾಟೆಲ್‍ಗಳಿಂದ ಹಲ್ಲೆ ಮಾಡಿ ಆತನ ಎಟಿಎಂ ಕಾರ್ಡ್ ಗಳನ್ನು ಕಿತ್ತುಕೊಂಡು ಜೀವ ಬೆದರಿಕೆಯೊಡ್ಡಿದ್ದಾರೆ. ಅಲ್ಲದೇ, ತನ್ನ ಹೆಂಡತಿಗೆ ಫೋನ್ ಮಾಡಿಸಿ ಅಪಘಾತವಾಗಿದೆ ಎಂದು ಸುಳ್ಳು ಹೇಳಿಸಿ 50,000 ರೂ ಹಣವನ್ನು ಆನ್ ಲೈನ್ ಮೂಲಕ ಅಕೌಂಟ್‍ಗೆ ಹಾಕಿಸಿಕೊಂಡು, ನಂತರ ಅದನ್ನು ಡ್ರಾ ಮಾಡಿಕೊಂಡು, ಈತನ ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ. 

ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡ ಮೇಟಗಳ್ಳಿ ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಬೆಲವತ್ತದ ಪ್ರವೀಣ(23), ಶಿವಕುಮಾರ್(23), ರಘು (25), ಬೋರೆ ಎಂಬವರನ್ನು ಫೆ.10ರಂದು ದಸ್ತಗಿರಿ ಮಾಡಿ ನಗದು, ಬೈಕ್ ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಓರ್ವ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕನಾಗಿದ್ದು, ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿರುತ್ತದೆ.

ಈ ಪತ್ತೆ ಕಾರ್ಯದಲ್ಲಿ ಮೈಸೂರು ನಗರದ ಡಿಸಿಪಿ ಗೀತಪ್ರಸನ್ನ ಹಾಗೂ ನರಸಿಂಹರಾಜ ವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಮಲ್ಲೇಶ, ಪಿಎಸ್ಐ ವಿಶ್ವನಾಥ್, ನಾಗರಾಜ್ ನಾಯ್ಕ್, ನರಸಿಂಹರಾಜ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿ ಅನಿಲ್ ಶಂಕಪಾಲ್, ಲಿಂಗರಾಜಪ್ಪ, ಎಂ.ಕಾಂತ, ರಮೇಶ, ಸುರೇಶ್, ಜೀವನ್, ಹನುಮಂತ್ ಕಲ್ಲೇದ್ ಹಾಗೂ ಮೇಟಗಳ್ಳಿ ಠಾಣಾ ಸಿಬ್ಬಂದಿ ಎಎಸ್ಐ ಪೊನ್ನಪ್ಪ, ದಿವಾಕರ, ಕೃಷ್ಣ, ಪ್ರಶಾಂತ್ ಕುಮಾರ್, ಆಶಾ, ಶ್ರೀಶೈಲ ಹುಗ್ಗಿ, ಚೇತನ್, ಚಂದ್ರಕಾಂತ್ ತಳವಾರ್, ಟೆಕ್ನಿಕಲ್ ಸೆಲ್ ನ  ಪೊಲೀಸ್ ಇನ್‍ಸ್ಪೆಕ್ಟರ್ ಲೋಲಾಕ್ಷಿ, ಸಿಬ್ಬಂದಿ ಗುರುದೇವ ಆರಾಧ್ಯ, ಕುಮಾರ್, ಮಂಜು ಹಾಗೂ ಶ್ಯಾಮ್ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News