ಕೂಡಿಟ್ಟ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ವಿದ್ಯಾರ್ಥಿನಿಯರು

Update: 2021-02-12 11:15 GMT

ಶಿವಮೊಗ್ಗ,ಫೆ.12: ಬೊಮ್ಮನಕಟ್ಟೆಯ ಇಬ್ಬರು ವಿದ್ಯಾರ್ಥಿನಿಯರು ತಾವು ಕೂಡಿಟ್ಟ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ಸಮರ್ಪಣೆ ಮಾಡಿದ್ದಾರೆ.

ಪೈಂಟಿಂಗ್ ಕೆಲಸ ಮಾಡುತ್ತಿರುವ ಶಂಕರ್ ಮತ್ತು ನೇತ್ರಾವತಿ ದಂಪತಿ ಮಕ್ಕಳಾದ ಅನುಶ್ರೀ ಮತ್ತು ಛಾಯಾಶ್ರೀ ಅವರು ಹಲವು ವರ್ಷಗಳಿಂದ ತಂದೆ, ತಾಯಿಗಳು ನೀಡಿದ್ದ ಹಣ ಕೂಡಿಟ್ಟಿದ್ದರು. ಈ ಹಣವನ್ನು ರಾಮಮಂದಿರ ನಿರ್ಮಾಣಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೂಲಕ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಈ ದೇಶದ ಕೋಟಿ ಕೋಟಿ ಜನರು ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ನೀಡುತ್ತಿದ್ದಾರೆ. ಶ್ರೀಮಂತರು ಲಕ್ಷಾಂತರ ರೂ. ಹಣ ಕೊಡುವುದು ದೊಡ್ಡದಲ್ಲ. ಆದರೆ ತಂದೆ- ತಾಯಿಗಳು ಖರ್ಚಿಗೆಂದು ಕೊಟ್ಟ ಕೂಡಿಟ್ಟ ಹಣವನ್ನು ಭಕ್ತಿಯಿಂದ ಶ್ರೀರಾಮನಿಗೆ ಸಮರ್ಪಿಸಿರುವುದು ಬಹುದೊಡ್ಡ ಸಂಗತಿಯಾಗಿದೆ. ಬೊಮ್ಮನಕಟ್ಟೆಯ ಈ ಇಬ್ಬರು ವಿದ್ಯಾರ್ಥಿನಿಯರು ನೀಡಿದ ಹಣ ನಮಗೆ ಇನ್ನೂ ಹೆಚ್ಚಿನ ಪ್ರೇರಣೆ ನೀಡುತ್ತದೆ. ಪ್ರಧಾನಿ ಮೋದಿಯವರ ಕರೆ ಕೂಡ ಸಾರ್ಥಕವಾಗಿದೆ ಎಂದರು.

ಬಡವರು ವಾಸಿಸುವ ಸ್ಥಳಗಳಿಂದ ರಾಮಮಂದಿರ ನಿರ್ಮಾಣಕ್ಕೆ ಹಣ ಬರುತ್ತಿರುವುದು ಸ್ವಾಗತದ ವಿಷಯವಾಗಿದೆ. ಅದರಲ್ಲೂ ಬಡವ ಶ್ರೀಮಂತ, ಕೂಲಿಕಾರ್ಮಿಕರು ಎಂಬ ಬೇಧವಿಲ್ಲದೇ ಹಣ ಹರಿದುಬರುತ್ತಿರುವುದು ಹಿಂದೂ ಧರ್ಮದ ಸಂಸ್ಕೃತಿಯ ಪ್ರತೀಕವೂ ಆಗಿದೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎಸ್.ಎನ್. ಚನ್ನಬಸಪ್ಪ, ಸ್ಥಳೀಯ ಮುಖಂಡ ಪುರುಷೋತ್ತಮ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News