×
Ad

ಸಾಲದ ರೂಪದಲ್ಲಿ ಸಿಗರೇಟ್ ನೀಡಲು ನಿರಾಕರಿಸಿದ್ದಕ್ಕೆ ಹಲ್ಲೆ ಪ್ರಕರಣ: ಚಿಕಿತ್ಸೆ ಫಲಿಸದೆ ವ್ಯಾಪಾರಿ ಸಾವು

Update: 2021-02-12 17:05 IST

ಶಿವಮೊಗ್ಗ, ಫೆ.12: ಸಿಗರೇಟ್ ಮತ್ತು ಕಿರಾಣಿ ಸಾಮಾನು ಸಾಲದ ರೂಪದಲ್ಲಿ ಕೊಡಲಿಲ್ಲ ಎಂಬ ಕಾರಣಕ್ಕೆ ನಡೆದಿದ್ದ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ನ್ಯಾಮತಿ ತಾಲೂಕು ಸಿದ್ದಾಪುರದ ವಿರೂಪಾಕ್ಷಪ್ಪ ಎಂಬವರು ಗುರುವಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿರೂಪಾಕ್ಷಪ್ಪ ಅವರ ಪತ್ನಿ ಪಾರ್ವತಮ್ಮ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೆ.04ರಂದು ವಿರೂಪಾಕ್ಷಪ್ಪ ಅವರ ಅಂಗಡಿಗೆ ತೆರಳಿದ್ದ ಟಿ.ಮಂಜಾನಾಯ್ಕ, ಮಂಜನಾಯ್ಕ, ಸಿದ್ದೇಶ್ ನಾಯ್ಕ ಮತ್ತು ನಾಗರಾಜ್ ನಾಯ್ಕ ಎಂಬವರು ಸಿಗರೇಟು ಮತ್ತು ಕಿರಾಣಿ ಸಾಮಾನು ಸಾಲ ಕೇಳಿದ್ದರು. ವಿರೂಪಾಕ್ಷಪ್ಪ ಅವರು ಸಾಲ ಕೊಡಲು ನಿರಾಕರಿಸಿದಾಗ ಈ ನಾಲ್ವರು ವಿರೂಪಾಕ್ಷಪ್ಪ ಮತ್ತು ಅವರ ಪತ್ನಿ ಪಾರ್ವತಮ್ಮ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಕೂಡಲೇ ಗಾಯಾಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿದ ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವಿರೂಪಾಕ್ಷಪ್ಪ ಅವರು ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಆರೋಪಿಗಳ ಸೆರೆ: ಕಿರಾಣಿ ಅಂಗಡಿಯಲ್ಲಿ ಸಿಗರೇಟ್ ಸಾಲ ನೀಡಲು ನಿರಾಕರಿಸಿದ್ದ ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿ, ಒಬ್ಬರ ಸಾವಿಗೆ ಕಾರಣವಾಗಿದ್ದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಿದರಹಳ್ಳಿ ತಾಂಡಾದ ಟಿ.ಮಂಜುನಾಯ್ಕ್, ಸಿದ್ದೇಶ್ ನಾಯ್ಕ್, ಎಸ್.ಮಂಜನಾಯ್ಕ್, ನಾಗರಾಜ್ ನಾಯ್ಕ್ ಬಂಧಿತ ಆರೋಪಿಗಳು.

ಪಾರ್ವತಮ್ಮ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಮತಿ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದರು. ಸಂಶಯಾಸ್ಪದ ವ್ಯಕ್ತಿಗಳ ಭಾವಚಿತ್ರಗಳನ್ನು ತೋರಿಸಿದ್ದು, ಗಾಯಾಳುಗಳು ಆರೋಪಿಗಳನ್ನು ಗುರುತಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News