ಖೋಡೇಸ್ ಗ್ರೂಪ್ ಮೇಲೆ ಐಟಿ ದಾಳಿ ಪ್ರಕರಣ: 878 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ

Update: 2021-02-12 13:11 GMT

ಬೆಂಗಳೂರು, ಫೆ.12: ತೆರಿಗೆ ಪಾವತಿಸದ ಆರೋಪಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎರಡು ದಿನಗಳ ಹಿಂದೆ ಖೋಡೇಸ್ ಗ್ರೂಪ್ ಮೇಲೆ ನಡೆಸಿದ ದಾಳಿಯಲ್ಲಿ 878.82 ಕೋಟಿ ರೂ. ಮೌಲ್ಯದ ನಗದು ಆಸ್ತಿ ಪಾಸ್ತಿಗಳು ಪತ್ತೆಯಾಗಿವೆ.

ಖೋಡೇಸ್ ಮಾಲಕರ ಮನೆ ಹಾಗೂ ಕಚೇರಿಗಳು ಸೇರಿ ಖೋಡೇಸ್ ಗ್ರೂಪ್‍ಗೆ ಸೇರಿದ 26ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ಆನಂದ ರಾವ್ ಸರ್ಕಲ್‍ನ ಶೇಷಾದ್ರಿ ರಸ್ತೆಯಲ್ಲಿರುವ ಖೋಡೇಸ್ ಗ್ರೂಪ್ ಮಾಲಕರ ಎರಡು ಮನೆ, ಖೋಡೇಸ್ ಬಿವರೇಜಸ್, ಖೋಡೆ ಆರ್‍ಸಿಎ, ಖೋಡೆ ಇಂಡಿಯಾ ಫ್ಯಾಕ್ಟರಿಗಳು ಮತ್ತು ಕಚೇರಿ ಸೇರಿ ವಿವಿಧೆಡೆ ಸುಮಾರು ಇಪತ್ತಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ದಾಳಿ ವೇಳೆ 878.82 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.

ಅಪಾರ ಪ್ರಮಾಣದ ರೆಸಿಡೆನ್ಸಿಯಲ್ ಜಾಗವನ್ನ ಕಮರ್ಷಿಯಲ್ ಪ್ರಾಪರ್ಟಿ ಮಾಡಲಾಗಿದೆ. ಬೆಂಗಳೂರು ಮೂಲದ ಡೆವಲಪರ್ ಜೊತೆ ಸೇರಿ ಜಂಟಿ ಒಪ್ಪಂದದ ಮುಖಾಂತರ ಲ್ಯಾಂಡ್ ಬದಲಾವಣೆ ಮಾಡಲಾಗಿದೆ. ಈ ಮೂಲಕ 692.82 ಕೋಟಿ ಆದಾಯ ಗಳಿಸಿದೆ. ಕೇರಳದ ಲಿಕ್ಕರ್ ಫ್ಯಾಕ್ಟರಿಯಲ್ಲಿ ಲೆಕ್ಕವಿಲ್ಲದ 74 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ. 7 ಕೋಟಿ ಹಣವನ್ನ ದೈನಂದಿನ ವ್ಯವಹಾರದಲ್ಲಿ ಸುಳ್ಳು ಖರ್ಚು ತೋರಿಸಲಾಗಿದ್ದು, 9 ಕೋಟಿ ಹಣವನ್ನು ಡೈರೆಕ್ಟರ್ ಗಳ ವಿವರಿಸಲಾಗದ ವೆಚ್ಚಕ್ಕೆ ತೋರಿಸಲಾಗಿದೆ ಎಂದು ತಿಳಿದುಬಂದಿದೆ.

150 ಕೋಟಿಯಷ್ಟು ಬೇನಾಮಿ ಆಸ್ತಿ ಕಂಪೆನಿಯ ನೌಕರರು ಮತ್ತು ಆಪ್ತರ ಹೆಸರಲ್ಲಿ ಪತ್ತೆಯಾಗಿದೆ. ಕಂಪೆನಿ ನಿರ್ದೇಶಕರ ಹೆಸರಲ್ಲಿ ವಿದೇಶಿ ಆಸ್ತಿಯನ್ನ ಸಹ ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಹಿನ್ನೆಲೆ ಜಾರಿ ನಿರ್ದೇಶನಾಲಯಕ್ಕೆ ಐಟಿಯಿಂದ ಮಾಹಿತಿ ರವಾನಿಸಿದೆ. ಮಾಹಿತಿ ಖಚಿತವಾಗುತ್ತಿದ್ದಂತೆ ಶೀಘ್ರದಲ್ಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News