ಕ್ರಾಂತಿ ಒಮ್ಮೆಲೆ ಸ್ಫೋಟ ಆಗಲ್ಲ, ಆದರೆ ಕ್ರಾಂತಿ ಆಗುವುದು ಖಚಿತ: ಬಿಜೆಪಿ ಶಾಸಕ ಯತ್ನಾಳ್

Update: 2021-02-12 14:03 GMT

ಬೆಂಗಳೂರು, ಫೆ. 12: ‘ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗುತ್ತಾರೆಂದು ನಾನು ಹೇಳಿದ್ದೆ. ಆ ಭಾಗದವರು ಸಿಎಂ ಆಗುವುದನ್ನು ತಪ್ಪಿಸಲು ಸಂಚು ನಡೆಯುತ್ತಿದೆ. ಇದರ ಹಿಂದೆ ಯಾರಿದ್ದಾರೆಂದು ಎಲ್ಲರಿಗೂ ಗೊತ್ತು' ಎಂದು ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಶುಕ್ರವಾರ ತಮಗೆ ಶೋಕಾಸ್ ನೋಟಿಸ್ ನೀಡಿದ ಬೆನ್ನಲ್ಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಶಾಸಕರ ಭಾವನೆಗಳನ್ನು ಯಾವುದೇ ಸಂದರ್ಭದಲ್ಲಿಯೂ ಮುಚ್ಚಿಡಲು ಸಾಧ್ಯವಿಲ್ಲ. ಕ್ರಾಂತಿಯನ್ನು ಮುಚ್ಚಿಡಲು ಆಗದು. ಕ್ರಾಂತಿ ಒಮ್ಮೆಲೆ ಸ್ಫೋಟ ಆಗುವುದಿಲ್ಲ. ಆದರೆ, ಕ್ರಾಂತಿ ಆಗುವುದು ಖಚಿತ. ಕ್ರಾಂತಿ ಆದ ಮೇಲೆನೇ ಶಾಂತಿ ಉಳಿಯುವುದು. ಇದೀಗ ಕೆಲ ಶಾಸಕರು ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ' ಎಂದು ಹೊಸಬಾಂಬ್ ಸಿಡಿಸಿದರು.

ನಾನು ಒಂಟಿ ಸಲಗ: ನನಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ. ಹೇಳುವವರು ಹೇಳ್ತಾರೆ, ನಾನು ಒಬ್ಬಂಟಿಗ ಎಂದು. ಯಾರೂ ಇಲ್ಲದಿದ್ದರೂ ನಾನು ಒಂಟಿ ಸಲಗನೇ' ಎಂದ ಯತ್ನಾಳ್, ವಾಜಪೇಯಿಯವರು ಇದನ್ನೇ ಹೇಳಿದ್ದಾರೆ. ‘ನಿನ್ನ ಜತೆ ಯಾರೂ ಇಲ್ಲ ಅಂದ್ರೂ ನೀನೊಬ್ಬನೇ ನಡಿ' ಎಂದು ಹೇಳಿದ್ದಾರೆ ಎಂದರು.

‘ನನಗೆ ವರಿಷ್ಠರು ಶೋಕಾಸ್ ನೋಟಿಸ್ ನೀಡಿದರೆ ಅದನ್ನು ನೋಡಿ ಮಾತನಾಡುತ್ತೇನೆ. ನಾನು ಒಬ್ಬ ಶಾಸಕ. ಶಾಸಕಾಂಗ ಪಕ್ಷದ ಸಭೆಯಲ್ಲೂ ಮಾತಾಡಿದೀನಿ. ಸಂದರ್ಭ ಬಂದರೆ ಪ್ರಧಾನಿಯವರ ಗಮನಕ್ಕೂ ತರುವೆ. ನಾನು ಏಕೆ ಮಾತಾಡಿದೆ ಎಂದು ಪಕ್ಷದ ಮುಖಂಡರಿಗೆ ಸ್ಪಷ್ಟೀಕರಣ ನೀಡುತ್ತೇನೆ' ಎಂದು ಕಿಡಿಕಾರಿದರು.

ಮಂತ್ರಿ ಆಗಲು ಮನಸ್ಸು ಮಾಡಿಲ್ಲ: ‘ನಾನು ಮಂತ್ರಿ ಆಗುವುದಿಲ್ಲ. ಆದರೆ, ಮಂತ್ರಿ ಆಗಿಲ್ಲ ಅನ್ನೋ ಅಸಮಾಧಾನದಿಂದ ಯತ್ನಾಳ್ ಹೀಗೆ ಮಾತಾಡ್ತಿದಾರೆಂದು ಕೆಲವರು ಹೇಳುತ್ತಾರೆ. ಆದರೆ, ನಾನು ಎಂದೂ ಮಂತ್ರಿ ಆಗಲಿಲ್ಲ ಎಂದು ಹೇಳಿಕೆ ನೀಡಿಲ್ಲ. ಮಂತ್ರಿ ಆಗುವ ಮನಸ್ಸು ಮಾಡಿಲ್ಲ. ಆದರೆ, ಜನಪರವಾಗಿ ಹೇಳಿಕೆ ನೀಡಿದ್ದೇನೆ. ನನಗೆ ಯಾರ ಮುಲಾಜು ಇಲ್ಲ' ಎಂದು ತಿಳಿಸಿದರು.

‘ನನ್ನ ಸ್ವಾರ್ಥಕ್ಕಾಗಿ ನಾನು ರಾಜಕಾರಣ ಮಾಡಿದವನಲ್ಲ. ಮೋದಿಯವರ ಆಶಯಕ್ಕೆ ತಕ್ಕಂತೆ ರಾಜ್ಯ ಸರಕಾರ ನಡೆಯಲಿಲ್ಲ ಎಂದು ನಾನು ಟೀಕೆ ಮಾಡಿದ್ದೇನೆ. ದಿಲ್ಲಿಯಿಂದ ಇಬ್ಬರು ಮುಖಂಡರು ಬಂದು ಶಾಸಕರ ದೂರು ಆಲಿಸಲಿ' ಎಂದ ಅವರು, ‘ವಿಭಾಗವಾಗಿ ಸಭೆ ಕರೆಯುವುದು ಬೇಡ' ಎಂದರು.

‘ಯತ್ನಾಳ್ ಹತಾಶರಾಗಿದ್ದಾರೆಂಬುದು ತಪ್ಪು. ನನಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಇಂತಹ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ' ಎಂದ ಯತ್ನಾಳ್, ‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು' ಎಂದು ಪುನರುಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News